ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಮಶಾನ ಅಭಿವೃದ್ಧಿಗೆ ಅಗತ್ಯ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಉದಯ್ ಶನಿವಾರ ಹೇಳಿದರು.ತಾಲೂಕಿನ ಸೋಮನಹಳ್ಳಿ ಹಾಗೂ ಚಾಮನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಮಶಾನ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿ, ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 48 ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಮಶಾನದ ಜಾಗದ ಕೊರತೆ ಇದೆ. ಜಾಗ ಇದ್ದರೂ ಸಹ ಮೂಲ ಸೌಲಭ್ಯಗಳು ಮರಿಚಿಕೆಯಾಗಿದೆ. ಹೀಗಾಗಿ ಅಭಿವೃದ್ಧಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.
ಸರ್ಕಾರ ಮೊದಲ ಹಂತದಲ್ಲಿ ಐದು ಗ್ರಾಮಗಳ ಸ್ಮಶಾನ ಅಭಿವೃದ್ಧಿಗೆ ತಲಾ 20 ಲಕ್ಷ ರು. ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದರು.ಸೋಮನಹಳ್ಳಿ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪ್ರೀತಮ್, ಹಳ್ಳಿಕರೆ ಮಾದೇಶ್, ಪುರಸಭೆ ಸದಸ್ಯ ಮೋಹನ್, ಮುಖಂಡರಾದ ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ಚಾಮನಹಳ್ಳಿ ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಗ್ರಾಪಂ ಸದಸ್ಯರಾದ ಜಗ್ಗ , ಎಚ್.ಟಿ.ಅನಂತಕುಮಾರ್, ಮುಖಂಡರಾದ ಅಶೋಕ್, ಕುಚೇಲ, ಶೇಖರ್, ತ್ಯಾಗರಾಜು, ದೇಶಹಳ್ಳಿ ಶಂಕರ್ ಮತ್ತಿತರರು ಇದ್ದರು.ಮುಡಾ ಹಗರಣದಲ್ಲಿ ಸಿಎಂ ಹೆಸರು ಪ್ರಸ್ತಾಪ, ಬಿಜೆಪಿಯಿಂದ ಅಪಪ್ರಚಾರ: ಕೆ.ಎಂ.ಉದಯ್
ಮದ್ದೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿ ನಾಯಕರು ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂಡಾ ಹಣ ಪಡೆದು ನಿವೇಶನ ಮಂಜೂರು ಮಾಡಿದೆ. ಬಿಜೆಪಿಯವರು ಈ ವಿಚಾರದಲ್ಲಿ ಕಥೆ ಕಟ್ಟುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಆಳ್ವಿಕೆ ನಡೆಸಿರುವ ಸಿದ್ದರಾಮಯ್ಯ ಅವರು ಎಂದೋ ಹಣ ಆಸ್ತಿ ಮಾಡಿ ಶ್ರೀಮಂತರಾಗಬಹುದಿತ್ತು. ಆದರೆ, ಆತ ಬಿಡಿಗಾಸಿಗೂ ಆಸೆ ಪಡುವ ವ್ಯಕ್ತಿಯಲ್ಲ. ಹಗರಣ ಹೇಗೆ ಈಚೆಗೆ ಬರಲಿದೆ ಎಂದು ಪ್ರಶ್ನಿಸಿದರು.ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚುನಾವಣಾ ಸಮಿತಿ ತೀರ್ಮಾನ ಮಾಡುತ್ತದೆ. ಒಂದು ವೇಳೆ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿದರು ಆಶ್ಚರ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಪ್ರಸ್ತಾಪ ಮಾಡುತ್ತಿಲ್ಲ. ಪಕ್ಷದ 138 ಶಾಸಕರು ಸಿದ್ದರಾಮಯ್ಯ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಅಲ್ಲದೇ, ಪಕ್ಷದ ಹೈಕಮಾಂಡ್ ಸಹ ಅವರನ್ನೇ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ ಎಂದರು.