ಮಹೇಶ ಛಬ್ಬಿ
ಮುಳಗುಂದ: ಕಳೆದ ಕೆಲವು ದಿನಗಳ ಹಿಂದಷ್ಟೇ ಡೀಸೆಲ್ ಅಭಾವ ಎದುರಾದಾಗ ಪೆಟ್ರೋಲ್ ಬಂಕ್‌ಗಳ ಮುಂದೆ ಕ್ಯಾನ್ ಗಳನ್ನು ಸಾಲಿನಲ್ಲಿಟ್ಟು ರೈತರು ಕಾಯುತ್ತಿದ್ದರು. ಅದೇ ರೀತಿ ಅನ್ನದಾತ ಈಗ ಬಿತ್ತನೆ ಬೀಜಕ್ಕಾಗಿ ತಮ್ಮ ಚಪ್ಪಲಿಗಳನ್ನೇ ಸರದಿ ಸಾಲಿನಲ್ಲಿ ರೈತ ಸಂಪರ್ಕ ಕೇಂದ್ರದ ಎದುರು ಇಟ್ಟು ಕಾಯುವಂಥ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಬುಧವಾರ ಬೆಳ್ಳಂಬೆಳಗ್ಗೆ ನೂರಾರು ರೈತರು ಗೋವಿನಜೋಳದ ಬೀಜ ಖರೀದಿಸಲು ತಮ್ಮ ಚಪ್ಪಲಿಗಳನ್ನು ಸಾಲಾಗಿ ಜೋಡಿಸಿಟ್ಟಿದ್ದರು. ಮನುಷ್ಯರು ನಿಲ್ಲಬೇಕಾದ ಸಾಲಿನಲ್ಲಿ ಚಪ್ಪಲಿಗಳು ಮೌನವಾಗಿ ನಿಂತಿದ್ದ ಈ ದೃಶ್ಯ ನೋಡುಗರಿಗೆ ಹಾಸ್ಯಾಸ್ಪದವಾಗಿ ಕಂಡರೂ, ಇದರ ಹಿಂದೆ ಅಡಗಿರುವ ರೈತರ ಕರುಣಾಜನಕ ಸ್ಥಿತಿ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯ ಮಾತ್ರ ಎದ್ದು ಕಾಣುತ್ತಿತ್ತು.
ಬರಿಗಾಲಲ್ಲಿ ಕಾಯುವಿಕೆ: ಮುಂಗಾರು ಮಳೆ ಮುನ್ಸೂಚನೆ ನೀಡುತ್ತಿದ್ದಂತೆ ಬಿತ್ತನೆ ಬೀಜಕ್ಕಾಗಿ ರೈತರು ಮುಗಿ ಬೀಳುತ್ತಿದ್ದಾರೆ. ಬೆಳಗಿನ ಜಾವವೇ ರೈತ ಸಂಪರ್ಕ ಕೇಂದ್ರಕ್ಕೆ ಲಗ್ಗೆ ಇಟ್ಟ ರೈತರು, ಸಿಬ್ಬಂದಿ ಬರುವವರೆಗೂ ಕಾಯಲು ಸಾಧ್ಯವಾಗದೆ, ತಮ್ಮ ಸರದಿ ತಪ್ಪಬಾರದೆಂಬ ಕಾರಣಕ್ಕೆ ಚಪ್ಪಲಿಗಳನ್ನೇ ಸಾಲಿನಲ್ಲಿಟ್ಟಿದ್ದರು. ತಾವು ಬರಿಗಾಲಿನಲ್ಲಿಯೇ ಪಕ್ಕದ ಹೋಟೆಲ್‌ಗಳಿಗೆ ಉಪಹಾರಕ್ಕೆ ಹಾಗೂ ಇತರ ಕೆಲಸಗಳಿಗೆ ತೆರಳಿ, ವಾಪಸ್ ಬಂದು ಚಪ್ಪಲಿಗಳ ಸಾಲಿನಲ್ಲಿ ನಿಂತು ಕಾಯುತ್ತಿದ್ದರು.ಮುಳಗುಂದ ಸುತ್ತಮುತ್ತಲ ಭಾಗದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಮತ್ತು ಸಂಪರ್ಕ ಕೇಂದ್ರಕ್ಕೆ ಗೋವಿನ ಜೋಳದ ಬೀಜ ಬಂದಿರುವ ಮಾಹಿತಿ ಸಿಗುತ್ತಿದ್ದಂತೆ ಚಿಂಚಲಿ, ನೀಲಗುಂದ, ಕಲ್ಲೂರು, ಸೀತಾಲಹರಿ, ಬಸಾಪುರ, ಶಿರುಂಜ, ಎಲಿಶಿರುಂಜ, ಸೊರಟೂರು, ನಾಗಾವಿ, ಬೆಳಧಡಿ, ಹರ್ತಿ, ಕಣವಿ, ಹೊಸೂರು ಸೇರಿದಂತೆ ಹಲವು ಗ್ರಾಮಗಳ ನೂರಾರು ರೈತರು ಮುಂಜಾನೆಯೇ ಜಮಾಯಿಸಿದ್ದರು. ರೈತರ ತಳ್ಳಾಟ- ನೂಕಾಟ ಹೆಚ್ಚಾಗಿ, ಸಿಬ್ಬಂದಿಗೆ ಬೀಜ ವಿತರಿಸಲು ಸಾಧ್ಯವಾಗದಿದ್ದಾಗ ಕೊನೆಗೆ ಪೊಲೀಸರ ನೆರವು ಪಡೆದು ಪರಿಸ್ಥಿತಿ ನಿಯಂತ್ರಿಸಿ ಬೀಜ ವಿತರಿಸಲಾಯಿತು.
ಸಿಪಿ 848, 201 ತಳಿ ಬೇಡಿಕೆ: ಮಾರುಕಟ್ಟೆಯಲ್ಲಿ ಜಿಪಿಆರ್, ಕಾವೇರಿ, ಮಾಹಿತಿ, ಶಿವಾನಿ ಮುಂತಾದ ಕಂಪನಿಗಳ ಬೀಜಗಳಿದ್ದರೂ, ರೈತರು ಮಾತ್ರ ಸಿಪಿ 848 ಮತ್ತು ಸಿಪಿ 201 ತಳಿಗಳಿಗಾಗಿಯೇ ಪಟ್ಟು ಹಿಡಿದಿದ್ದಾರೆ. ಈ ತಳಿಗಳು ಕಡಿಮೆ ಮಳೆಯಾದರೂ ತೇವಾಂಶ ಹಿಡಿದಿಟ್ಟುಕೊಂಡು ಉತ್ತಮ ಇಳುವರಿ ನೀಡುತ್ತವೆ. ಹೀಗಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇತರ ಬೀಜಗಳನ್ನು ಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಸಿಪಿ 848 ಹಾಗೂ 201 ತಳಿಗಳು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರ ಸಬ್ಸಿಡಿ(ರಿಯಾಯಿತಿ) ದರದಲ್ಲಿ ಇದನ್ನು ನೀಡಬೇಕಿರುವುದರಿಂದ, ಕಂಪನಿಗಳು ನಷ್ಟದ ನೆಪವೊಡ್ಡಿ ಸರ್ಕಾರಕ್ಕೆ ಬೀಜ ಪೂರೈಸಲು ಹಿಂದೇಟು ಹಾಕುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಪಟ್ಟು: ಇಲ್ಲಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ಮಾರುಕಟ್ಟೆ ದರಕ್ಕೂ ಇಲ್ಲಿಗೂ ಬಹಳ ವ್ಯತ್ಯಾಸವಿದೆ. ಎಲ್ಲವೂ ಉತ್ತಮ ತಳಿಯ ಬೀಜಗಳೇ ಆಗಿದ್ದರೂ ರೈತರು ನಿರ್ದಿಷ್ಟ ಕಂಪನಿಯ ಬೀಜಕ್ಕೇ ಪಟ್ಟು ಹಿಡಿಯುತ್ತಿದ್ದಾರೆ. ಸಿಪಿ ಕಂಪನಿಯ ಬೀಜಗಳು ಇನ್ನೆರಡು ದಿನಗಳಲ್ಲಿ ಮತ್ತೆ ಬರುವ ಸಾಧ್ಯತೆಯಿದೆ ಎಂದು ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ ತಿಳಿಸಿದರು.