ಸಾರಾಂಶ
ಕೋಟೆನಾಡಲ್ಲಿ ಅಪರೂಪದ ಬಸವ ಪುತ್ಥಳಿ, ಆರಡಿ ಎತ್ತರದ ತಗಡಿನ ಪೀಠದ ಮೇಲೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಆಕೃತಿ । ದುಬಾರಿ ವೆಚ್ಚವಿಲ್ಲ, ಕೆಲವೇ ಸಾವಿರದಲ್ಲಿ ನಿರ್ಮಾಣ । ಎಬ್ಬಿಕೊಂಡು ಹೋಗಿ ಎಲ್ಲಿಯಾದರೂ ಇಡಬಹುದು । ಶಾಸಕ ವಿರೇಂದ್ರ ಪಪ್ಪಿ ಬೆಂಬಲಿಗರ ಮಹತ್ಕಾರ್ಯಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗವಿಶ್ವದಲ್ಲಿಯೇ ಅತ್ಯಧಿಕ ಅಂದರೆ 328 ಅಡಿ ಎತ್ತರದ ನೂರಾರು ಕೋಟಿ ರು.ವೆಚ್ಚದ ಬಸವ ಪುತ್ಥಳಿ ಸ್ಥಾಪನೆಗೆ ಮುಂದಾಗಿ 25 ಕೋಟಿಗೂ ಹೆಚ್ಚು ಸರ್ಕಾರಿ ಹಾಗೂ ಸಾರ್ವಜನಿಕ ಹಣ ದುರುಪಯೋಗದ ಆರೋಪ ಹೊತ್ತಿರುವ ಕೋಟೆ ನಾಡು ಚಿತ್ರದುರ್ಗ ಇದೀಗ ಅಪರೂಪದ ಬಸವ ಪುತ್ಥಳಿ ಪ್ರತಿಷ್ಠಾಪನೆಗೆ ಸುದ್ದಿಯಾಗಿದೆ.
ಶಾಸಕ ವೀರೇಂದ್ರ ಪಪ್ಪಿ ಅವರ ಬೆಂಬಲಿಗರೆನ್ನಲಾದ ವೀರಶೈವ ಲಿಂಗಾಯಿತ ಯುವ ವೇದಿಕೆ ಕಾರ್ಯಕರ್ತರು ಇಂತಹದ್ದೊಂದು ಪುತ್ಥಳಿ ಪ್ರತಿಷ್ಠಾಪಿಸಿದ್ದು, ಆ ಮೂಲಕ ಬಸವ ಪುತ್ಥಳಿ ನಿರ್ಮಾಣದ ವಿಚಾರದಲ್ಲಿ ಚಿತ್ರದುರ್ಗಕ್ಕೆ ಅಂಟಿದ್ದ ಕಳಂಕ ನಿವಾರಣೆ ಯತ್ನಿಸಿದ್ದಾರೆ.ಚಿತ್ರದುರ್ಗದ ಹೊರ ವಲಯ ಚಂದ್ರವಳ್ಳಿಗೆ ಹೋಗುವ ಮಾರ್ಗದ ತಿರುವಿನಲ್ಲಿರುವ ಚರಂಡಿ ಪಕ್ಕದಲ್ಲಿ ಬಸವ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೊದಲು ನಡು ರಸ್ತೆಯಲ್ಲಿ ಪುತ್ಥಳಿ ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತಾದರೂ ಕಡೇ ಗಳಿಗೆಯಲ್ಲಿ ನಿಲುವು ಬದಲಾಯಿಸಿ ರಸ್ತೆ ಅಂಚಿನ ಚರಂಡಿ ಜಾಗವೇ ಸೂಕ್ತವೆಂದು ಭಾವಿಸಿ ಅಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗಿದೆ.
ಪುತ್ಥಳಿ ಪ್ರತಿಷ್ಠಾಪನೆಗೆ ಮಧ್ಯರಾತ್ರಿ ಸೂಕ್ತವೆಂದು ನಿರ್ಣಯಿಸಿ ಅದರಂತೆ ನಡೆದುಕೊಳ್ಳಲಾಗಿದೆ. ಕಳೆದ ಮಂಗಳವಾರ ರಾತ್ರಿ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಬುಧವಾರ ಮುಂಜಾನೆ ವಾಕ್ ಹೋಗುವರಿಗೆ ಬಸವಣ್ಣ ಪುತ್ಥಳಿ ಕಂಡು ಅಚ್ಚರಿಯೋ ಅಚ್ಚರಿ.ನೂರಾರು ಇಟ್ಟಿಗೆ ಬಳಸಿ ಮೂರುವರೆ ಅಡಿ ಅಗಲದ ಚಚ್ಚೌಕದ ಸಿಮೆಂಟ್ ಕಟ್ಟೆ ನಿರ್ಮಿಸಿ ಅದರ ಮೇಲೆ ಆರಡಿ ಎತ್ತರದ ತಗಡಿನ ಪೀಠ ಸಿಗಿಸಲಾಗಿದೆ. ಇದರ ತುದಿಗೆ ಪ್ಲಾಸ್ಟರ್ ಆಫ್ ಫ್ಯಾರಿಸ್ ನಿಂದ ಮಾಡಲಾದ ಬಸವ ಪುತ್ಥಳಿಯಿಟ್ಟು ಒಂದೆರೆಡು ಹೂವಿನ ಹಾರ ಹಾಕಿ ಜೈಕಾರ ಕೂಗಿ ಪುತ್ಥಳಿ ಪ್ರತಿಷ್ಠಾಪನೆ ಬಹು ವರ್ಷದ ಕನಸನ್ನು ನನಸು ಮಾಡಲಾಗಿದೆ.
ಸಾಮಾನ್ಯವಾಗಿ ರಾಜ್ಯ ಇತರೆಡೆ ಸ್ಥಾಪನೆ ಮಾಡಲಾಗಿರುವ ಬಸವ ಪುತ್ಥಳಿಗಳು ಅಶ್ವಾರೂಢ ಸ್ಥಿತಿಯಲ್ಲಿದ್ದೂ ಬಹುತೇಕ ಕಂಚಿನದ್ದಾಗಿದೆ. ಇದಕ್ಕಾಗಿ ಹತ್ತಾರು ವರ್ಷಗಳ ಕಾಲ ಪ್ಲಾನ್ ಮಾಡಿ, ಅನುದಾನ ಕ್ರೋಡೀಕರಿಸಿ, ಸ್ಥಳೀಯ ಸಂಸ್ಥೆಗಳ ಅನುಮತಿ (ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಿದೆ) ಪಡೆದು ಪುತ್ಥಳಿ ನಿರ್ಮಿಸಲಾಗುತ್ತಿತ್ತು. ಆದರೆ ಚಿತ್ರದುರ್ಗದ ಬಸವ ಪುತ್ಥಳಿಗೆ ಅಂತಹ ನಿಯಮಗಳನ್ನೇನೂ ಪಾಲನೆ ಮಾಡಲಾಗಿಲ್ಲ.ಚಿತ್ರದುರ್ಗ ಜಿಲ್ಲೆ ಬಸವತತ್ವ ಪ್ರತಿಪಾದನೆಯ ದಟ್ಟ ನೆಲ. ಮುರುಘಾಮಠ, ಸಿರಿಗೆರೆ ಮಠ, ಸಾಣೆಹಳ್ಳಿ ಮಠ, ಸಾಲದೆಂಬಂತೆ ಬಸವತತ್ವ ಪ್ರಚುರ ಪಡಿಸುವಲ್ಲಿ ಮುಂದಾಳತ್ವದಲ್ಲಿರುವ ಮಾದಾರ ಗುರುಪೀಠ, ಬೋವಿಗುರುಪೀಠ, ಛಲವಾದಿ ಗುರುಪೀಠ, ಹರಳಯ್ಯ ಗುರುಪೀಠ, ಕುಂಚಿಟಿಗ ಗುರು ಪೀಠಗಳಿವೆ. ಈ ಎಲ್ಲ ಪೀಠಗಳು ವಿನೂತನ ಮಾದರಿಯ ಬಸವ ಪುತ್ಥಳಿ ಪ್ರತಿಷ್ಟಾಪನೆ ಸಾಕ್ಷೀಕರಿಸಿದಂತೆ ಕಾಣಿಸುತ್ತಿದೆ.
ಅಂದಹಾಗೆ ಚಿತ್ರದುರ್ಗದ ಈ ಬಸವ ಪುತ್ಥಳಿ ಭವಿಷ್ಯದಲ್ಲಿ ಇದೇ ಜಾಗದಲ್ಲಿ ಇರುತ್ತದೆ ಎಂಬುದಕ್ಕೆ ಯಾವುದೇ ಬಗೆಯ ಖಚಿತತೆ ಇಲ್ಲ. ಇಡೀ ಪುತ್ಥಳಿಯ ಎಬ್ಬಿಕೊಂಡು ಹೋಗಿ ಮತ್ತೆ ಎಲ್ಲಿಯಾದರೂ ಚರಂಡಿ ಪಕ್ಕ ಇಡಬಹುದು. ಒಂದು ರೀತಿಯಲ್ಲಿ ಗೂಡಂಗಡಿ ಮಾದರಿಯದು. ರಾತ್ರೋರಾತ್ರಿ ಬಸವ ಪುತ್ಥಳಿಯ ಒಕ್ಕಲೆಬ್ಬಿಸಬಹುದು. ಮಳೆ ಗಾಳಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಕಿತ್ತು ಹೋಗಬಹುದು.ಪುತ್ಥಳಿಯ ಆಯುಷ್ಯ ಇಷ್ಟೇ ದಿನ ಎಂದು ನಿರ್ಧರಿಸಲಾಗದು. ಬೀಸುವ ಗಾಳಿಗೆ ಪುತ್ಥಳಿ ಹಾರಿ ಹೋಗಬಹುದು,ಬಿಸಿಲಿಗೆ ಬಣ್ಣ ಬದಲಾಗಬಹುದು. ಮುಂದೆ ಬರುವ ಮುಂಗಾರು ಮಳೆಗೆ ಕರಗಲೂ ಬಹುದು. ಹೀಗಾದಲ್ಲಿ ನೋವು ಮಾಡಿಕೊಳ್ಳುವ ಪ್ರಮೇಯ ಎದುರಾಗದು. ಅಯ್ಯೋ ಬಸವಣ್ಣನಿಗೆ ಈ ಪರಿಸ್ಥಿತಿ ಬಂತಾ ಎಂದು ಮರುಗುವ ಮನಸ್ಸುಗಳೂ ಇರಲ್ಲ. ಏಕೆಂದರೆ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲವೆಂದಿದ್ದಾನೆ ಬಸವಣ್ಣ. ಹಾಗಾಗಿ ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆ ಮಾಡಲಾದ ಬಸವ ಪುತ್ಥಳಿ ಬಸವಣ್ಣನ ನಿಜದನಿಯ ಆಶಯಗಳಿಗೆ ಇಂಬು ನೀಡಿದಂತಿದೆ. ಸ್ಥಾವರವಾಗಲು ಬಸವಣ್ಣ ಒಲ್ಲೆ ಎಂದಂತೆ ಕಾಣಿಸುತ್ತದೆ. ಅಷ್ಟರ ಮಟ್ಟಿಗೆ ಬಸವತತ್ವ ಪರಿಪಾಲನೆ ಆಗಿದೆ. ಇನ್ನು ಮೇಲೆ ಬಸವ ಪುತ್ಥಳಿ ಪ್ರತಿಷ್ಠಾಪನೆಗೆ ವಿಶೇಷವಾದ ಸ್ಥಳ ಗುರುತಿಸುವ ಅಗತ್ಯವೇನಿಲ್ಲ. ಚರಂಡಿ ಪಕ್ಕ ಮೂರಡಿ ಜಾಗವಿದ್ದರೆ ಸಾಕು. ಅಂತರಂಗದ ಮಲಿನ ತೊಳೆದ ಬಸವಣ್ಣನಿಗೆ ಊರು ಮಲಿನ ಹೋಗುವ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸುವ ಶಾಸಕ ವೀರೇಂದ್ರ ಪಪ್ಪಿ ಬೆಂಬಲಿಗರ ಹೊಸ ಆಲೋಚನೆಗಳಿಗೆ ಕೋಟೆ ನಾಡು ಚಿತ್ರದುರ್ಗ ತೆರೆದುಕೊಂಡಿದೆ.