ಸಾರಾಂಶ
ಪಿ.ಎಸ್.ಪಾಟೀಲ ರೋಣ
ಚಂಡು ಹೂವಿನ ಎಲೆಯಂತೆ ಕಾಣುವುದು ಹೊರತುಪಡಿಸಿದಂತೆ ಕಾಯಿ, ಹಣ್ಣು, ಬೀಜ, ಹೂ, ಎಸಳು, ಟೊಂಗೆ, ಮರದ ಹೊರಗಿನ ನೋಟ ಸೇರಿದಂತೆ ಎಲ್ಲವೂ ಸಾಮಾನ್ಯ ಬೇವಿನಮರದ ಹೊಲಿಕೆ. ಇಂಥ ಅಪರೂಪದ ಬೇವಿನ ಮರವೊಂದು ಪಟ್ಟಣದಲ್ಲಿ ಪತ್ತೆಯಾಗಿದೆ.ಅರಸು ಮನೆತನದರು ಈ ಬೇವಿನ ಮರವನ್ನು ಶಕ್ತಿ ದೇವತೆ ಪ್ರತೀಕವಾಗಿ ಬೆಳೆಸಿ ಪೂಜಿಸುತ್ತಿದ್ದರು ಎನ್ನುವ ಕಾರಣಕ್ಕೆ ಇದಕ್ಕೆ "ಅರಸು ಬೇವಿನ ಮರ " ಎನ್ನುವ ಹೆಸರು ಚಾಲ್ತಿಯಲ್ಲಿದೆ.
ಪಟ್ಟಣದಿಂದ 2 ಕಿಮೀ ಪೂರ್ವಕ್ಕೆ ಜಿಗಳೂರ ಗ್ರಾಮಕ್ಕೆ ತೆರಳುವ ಒಳ ರಸ್ತೆಯಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಸೇರಿದ ಹೊಲವೊಂದರಲ್ಲಿದೆ ಈ ಮರವಿದೆ. 35 ವರ್ಷದ ಮರ ಇದಾಗಿದ್ದು. ಎಲೆ ಮತ್ತು ಎಸಳಿನ ಹಂದರ ಮಾತ್ರ ನೋಡಲು ಚಂಡು ಹೂವಿನ ಎಲೆಯಂತೆ (ಅತೀ ಹತ್ತಿರ ಹೋಗಿ ನೋಡಿದಾಗ ಮಾತ್ರ) ಕಾಣುತ್ತದೆ. ಸ್ವಲ್ಪ ದೂರದಿಂದ ನೋಡಿದರೆ ಸಾಮಾನ್ಯ ಬೇವಿನ ಎಲೆಯಂತೆ ಕಾಣುತ್ತದೆ.ಅರಸು ಕುಟುಂಬ ಪೂಜೆ: ಈ ಹಿಂದೆ ರಾಜ್ಯ, ಪ್ರಾಂತ, ಪರಗಣಗಳಾಗಿ ವಿಂಗಡಿಸಿಕೊಂಡು ಆಳ್ವಿಕೆ ನಡೆಸಿದ ರಾಜಮನೆತನದವರು ತಮ್ಮ ವಾಡೆ, ಕೋಟೆ, ಅರಮನೆ ಆವರಣದಲ್ಲಿ ಈ ಬೇವಿನಮರ ಬೆಳೆಸುತ್ತಿದ್ದರು ಎನ್ನಲಾಗಿದೆ. ಈ ಮರ ರಾಜಮನೆತನದವರಿಗೆ ಪೂಜ್ಯನೀಯ ಮತ್ತು ಶಕ್ತಿ ದೇವತೆ ಸ್ವರೂಪವಾಗಿತ್ತು. ನವ ದುರ್ಗೆಯರು ನೆಲೆಸಿದ ದೈವಿಕ ಮರವಿದು. ಮಹಾನವಮಿಯಲ್ಲಿ ಈ ಮರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಯುದ್ದಕ್ಕೆ ತೆರಳುವ ಸಂದರ್ಭದಲ್ಲಿ ತಾಯಿ ಅಥವಾ ಪತ್ನಿ ಈ ಮರದಲ್ಲಿ ನೆಲೆಸಿದ ನವ ದುರ್ಗೆಯರಿಗೆ ಪೂಜಿಸಿ, ಆರತಿ ಬೆಳಗಿ, ಯುದ್ದದಲ್ಲಿ ವಿಜಯಶಾಲಿಯಾಗುವಂತೆ ಬೇಡಿಕೊಳ್ಳುತ್ತಿದ್ದರು. ರಾಜಮನೆತನದವರು ಪ್ರತಿಯೊಂದು ಶುಭ ಕಾರ್ಯಕ್ಕೂ ಮುಂಚೆ ಪೂಜೆ ಮಾಡುವ ಈ ಮರ ಇದು. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಈ ರೀತಿಯ ಮರ ಕಾಣುವುದು ಅತೀ ವಿರಳ.
ಇಲ್ಲಿ ಹೇಗೆ ಬೆಳೆಯಿತು?: 35 ವರ್ಷಗಳ ಹಿಂದೆ ರೋಣ ಪಟ್ಟಣದ ಪಾಟೀಲ (ದೌಲತ್ತಗೌಡ್ರ) ಮನೆತನದವರು ಹತ್ತಿ ಕಾಳು ಜೀನಿಂಗ್ ಪ್ಯಾಕ್ಟರಿ ನಿರ್ಮಿಸಲು ಪಟ್ಟಣದ ಹತ್ತಿರವಿರುವ ತಮ್ಮ ಜಮೀನಿನಲ್ಲಿ ಬೆಳೆದ ಅರಸು ಬೇವಿನ ಮರ ತೆರವುಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಪಟ್ಟಣದ ದಿ. ನೀಲಪ್ಪ ಮಾದರ (ಶ್ರೀ ದುರ್ಗಾದೇವಿ ಅರಾಧಕರು) ಎಂಬುವರು, ಈ ಮರದ ಮಹತ್ವ ವಿವರಿಸಿ, ಈ ಮರದ ಸಂತತಿ ಉಳಿಯಬೇಕು ಎನ್ನುವ ಕಾರಣಕ್ಕೆ ಅದರ ಬೀಜವನ್ನು ದುರ್ಗಾದೇವಿ ಮಂದಿರಕ್ಕೆ ಸೇರಿದ ಹೊರದಲ್ಲಿ ಊರಿ ಬೆಳೆಸಿದ್ದಾರೆ.ಅರಸು ಬೇವಿನಮರ ಅತ್ಯಂತ ಅಪರೂಪ, ವಿಶಿಷ್ಟವಾಗಿದ್ದು, ರಾಜಮನೆತನದವರು ಶಕ್ತಿದೇವತೆ ನವದುರ್ಗೆಯರ ಪ್ರತೀಕವಾಗಿ ಈ ಬೇವಿನಮರ ಪೂಜಿಸುತ್ತಿದ್ದರು. ಸದ್ಯ ಎಲ್ಲಿಯೂ ಸಿಗದಿರುವ ಈ ಬೇವಿನಮರದ ಸಂತತಿ ಉಳಿಯಬೇಕಿದೆ. ಈ ದಿಶೆಯಲ್ಲಿ ಅರಣ್ಯ ಇಲಾಖೆ, ಪರಿಸರ ಪ್ರೇಮಿಗಳು, ಪರಿಸರ ತಜ್ಞರು ಗಮನ ಹರಿಸಬೇಕಿದೆ ಎಂದು ಪುರಸಭೆ ಸದಸ್ಯ ಮಲ್ಲಯ್ಯ ಗುರಬಸಪ್ಪನಮಠ ತಿಳಿಸಿದ್ದಾರೆ.
ಸೌಥ ಆಫ್ರಿಕಾದಲ್ಲಿ ಬೆಳೆಯುವ ಲೆಮೆಟಿಯಾ ಫರ್ಗುನ್ಯೂ ಎಂಬ ಮರದ ಎಲೆ ಹೊಲುವ ಈ ಬೇವಿನಮರ ಭಾರತ ದೇಶದಲ್ಲಿಯೇ ವಿಶಿಷ್ಟ ಮರವಾಗಿದೆ. ಇಂಡೋ-ವಲಯ ಪ್ರದೇಶ ಹಾಗೂ ಆಫ್ರಿಕದ ಉಷ್ಣ ವಲಯಗಳಲ್ಲಿ ಬೆಳೆಯುತ್ತದೆ. ಅತೀ ಹೆಚ್ಚು ಆಮ್ಲಜನಕ ನೀಡುವ ಮರವಿದು. ನಾನು ದೇಶದ ಸಾಕಷ್ಟು ಭಾಗಗಳಲ್ಲಿ ಸಂಚರಿಸಿದ್ದು, ಇಂತಹ ಮರ ನೋಡಿಲ್ಲ. ಇದೊಂದು ವಿಭಿನ್ನ ಮತ್ತು ವಿಶಿಷ್ಟ ಮರವಾಗಿದೆ. ಈ ಕುರಿತು ಸಂಶೋಧನೆಯಾಗಬೇಕು ಎಂದು ಪರಿಸರ ತಜ್ಞ ಮಂಜುನಾಥ ನಾಯಕ ಹೇಳಿದ್ದಾರೆ.