25 ಸಾವಿರ ಸಸಿ ನೆಟ್ಟು ಪೋಷಿಸುವ ಸಂಕಲ್ಪ

| Published : Aug 31 2025, 02:00 AM IST

ಸಾರಾಂಶ

ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಈ ವರ್ಷ ಸುಮಾರು 25 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಹೊಂದಲಾಗಿದೆ.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಈ ವರ್ಷ ಸುಮಾರು 25 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಹೊಂದಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಗಿಡಮರಗಳನ್ನು ದತ್ತು ನೀಡಿ ಪೋಷಿಸಲು ಸಲಹೆ ನೀಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಶ್ರೀ ಶಿವಯೋಗಿ ನಗರದ ಸಾವಿತ್ರಿಬಾಯಿ ಪುಲೆ ರಸ್ತೆ ಸುಧಾರಣೆಗೆ ಭೂಮಿಪೂಜೆ ಹಾಗೂ ಎಲ್ಎಸ್‌ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು. ಶಿವಯೋಗಿ ನಗರದ ನಿವಾಸಿಗಳು ಇಲ್ಲಿನ ಉದ್ಯಾನವನಕ್ಕೆ ನನ್ನ ಹೆಸರು ಇಡುವ ಮೂಲಕ ತಮ್ಮ ಜವಾಬ್ದಾರಿ ಹೆಚ್ಚಿಸಿದ್ದಾರೆ. ಇಲ್ಲಿನ ಗಿಡಗಳನ್ನು ಬೆಳೆಸಲು ಪ್ರತಿಯೊಂದು ನಿವಾಸಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ನಿಮಗೆ ಬೇಕಾಗುವ ಮೂಲಸೌಕರ್ಯ ಒದಗಿಸುವ ಜವಾಬ್ದಾರಿಯನ್ನು ನಾನು ಖಂಡಿತವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು. ಅಥಣಿ ಪಟ್ಟಣದ ಹೊರವಲಯದಲ್ಲಿರುವ ಶಿವಯೋಗಿ ನಗರದ ಶೇ.90ರಷ್ಟು ಕುಟುಂಬಗಳ ನಿವೇಶನಗಳಿಗೆ ಇನ್ನೂವರೆಗೆ ಹಕ್ಕು ಪತ್ರಗಳು ಲಭ್ಯವಾಗಿಲ್ಲ. ಇದರಿಂದ ಅನೇಕ ಮೂಲಸೌಲಭ್ಯಗಳಿಂದ ಇಲ್ಲಿನ ಜನರು ವಂಚಿತರಾಗುತ್ತಿದ್ದು, ಗ್ರಾಪಂ ಹಾಗೂ ಪುರಸಭೆ ಅಧಿಕಾರಿಗಳ ಜಂಟಿ ಸಭೆ ನಡೆಸುವ ಮೂಲಕ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.

ಶಿವಯೋಗಿ ನಗರದ ಈ ಬಡಾವಣೆಯಲ್ಲಿ ಸಾವಿರಾರು ಕುಟುಂಬಗಳು ವಾಸವಾಗಿದ್ದು, ಅವರಿಗೆ ಅನೇಕ ವರ್ಷಗಳಿಂದ ಹಕ್ಕುಪತ್ರಗಳೇ ಇಲ್ಲದಿರುವುದರಿಂದ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಉಪ ಗ್ರಾಮಗಳ ವ್ಯಾಪ್ತಿಯಲ್ಲಿ ಸೇರಿಸಿ ಎಲ್ಲ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡಲು ಗ್ರಾಪಂ ಅಧಿಕಾರಿಗಳು ಮುಂದಾಗಬೇಕು. ಅಲ್ಲದೆ ಇಲ್ಲಿ ಅನೇಕ ಮೂಲಸೌಕರ್ಯಗಳ ಕೊರತೆ ಇದ್ದು, ಇವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪುರಸಭೆಯ ಅಧಿಕಾರಿ ಮತ್ತು ಗ್ರಾಪಂ ಅಧಿಕಾರಿಗಳ ಜಂಟಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಮಾತನಾಡಿ, ಹಸಿರೇ ಜೀವನದ ಉಸಿರಾಗಿದೆ. ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಪೋಷಿಸಬೇಕು. ಅಥಣಿ ಶಿವಯೋಗಿಗಳು ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಪ್ರತಿನಿತ್ಯ ಪೂಜೆಗೆ ಬೇಕಾಗುವ ಪತ್ರಿ ಮತ್ತು ಹೂಗಳನ್ನು ಕೂಡ ಗಿಡದಿಂದ ಕಿತ್ತುಕೊಳ್ಳುತ್ತಿರಲಿಲ್ಲ. ಗಿಡಗಳಿಗೆ ನೋವಾಗುತ್ತದೆ ಎಂಬ ಎಂಬ ಭಾವನೆ ಅವರದಾಗಿತ್ತು. ಶಿವಯೋಗಿ ನಗರದ ನಿವಾಸಿಗಳಾಗಿರುವ ತಾವು ಶಿವಯೋಗಿಗಳ ಸಂಕಲ್ಪದಂತೆ ಪರಿಸರ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಈ ವೇಳೆ ಸಂಕೋನಟ್ಟಿ ಗ್ರಾಪಂ ಅಧ್ಯಕ್ಷ ಶಂಕರ ಗಡದೆ, ಹಿರಿಯ ಮುಖಂಡ ಸದಾಶಿವ ಬುಟಾಳಿ, ಶಿವಾನಂದ ದಿವಾನಮಳ, ಮಹಾದೇವ ಹೊನ್ನೋಳ್ಳಿ, ನಾನಾಸಾಬ ಗೋಟಖಿಂಡಿ, ಗಿರೀಶ ದಿವಾನಮಳ, ಸುರೇಶ ಅಲಬಾಳ, ಮಲ್ಲು ಕುಳ್ಳೋಳ್ಳಿ, ಮುತ್ತು ಮೊಕಾಶಿ, ಬಸವರಾಜ ತೇರದಾಳ, ರಾಜು ಹಳ್ಳದಮಳ, ಆಕಾಶ ಬುಟಾಳಿ, ರಾಮನಗೌಡ ಪಾಟೀಲ, ಬಾಬು ಬಕಾರಿ, ಶ್ರೀಶೈಲ ಹಳ್ಳದಮಳ, ಶಿವು ಬಳ್ಳೋಳ್ಳಿ, ಶಿವಪಾದ ರೋಖಡಿ, ಪ್ರಶಾಂತ ತೋಡಕರ, ರವಿ ಬಡಕಂಬಿ, ಶಿವರುದ್ರ ಘೋಳಪ್ಪನವರ, ಶೇಖರ ಕನಕರೆಡ್ಡಿ, ಬಸು ತೇರದಾಳ, ರಾಹುಲ್ ನೂಲಿ, ರಾಕೇಶ್ ಮೈಗೂರ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪಿಡಿಓ ಬೀರಪ್ಪ ಕಡಗಂಚಿ ಸೇರಿ ಇತರರು ಇದ್ದರು.