ಮರೆತು ಹೋಗುತ್ತಿರುವ ಜೋಳದ ಹಂತಿಗೆ ಪುನರುಜ್ಜೀವನ

| Published : Apr 05 2024, 01:04 AM IST

ಸಾರಾಂಶ

ರಾಶಿ ಯಂತ್ರಗಳ ಸದ್ದಿನಲ್ಲಿ ಹಂತಿ ಮರೆಯಾಗಿದ್ದರೂ ಸಹ ಇಲ್ಲಿನ ನಲವಾರ ಹತ್ತಿರದ ಸೂಗೂರ (ಎನ್)ನ ಸ್ವಯಂಸಿದ್ದ ಭೋಜಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಜೋಳದ ಹಂತಿಯನ್ನು ಪುನರುಜ್ಜೀವನಗೊಳಿಸಿ ಪೋಷಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಬಾದರಾಶಿ ಯಂತ್ರಗಳ ಸದ್ದಿನಲ್ಲಿ ಹಂತಿ ಮರೆಯಾಗಿದ್ದರೂ ಸಹ ಇಲ್ಲಿನ ನಲವಾರ ಹತ್ತಿರದ ಸೂಗೂರ (ಎನ್)ನ ಸ್ವಯಂಸಿದ್ದ ಭೋಜಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಜೋಳದ ಹಂತಿಯನ್ನು ಪುನರುಜ್ಜೀವನಗೊಳಿಸಿ ಪೋಷಿಸುತ್ತಿದ್ದಾರೆ.

ಮಠದಂಗಳದಲ್ಲೇ ಅವರು ಭಾನುವಾರ ಸಂಜೆಯಿಂದ ಹಂತಿ ಶುರುಮಾಡಿ ಅಹೋರಾತ್ರಿ ನಡೆಸಿದರು. ಹಂತಿಯೊಂದಿಗೆ ಗ್ರಾಮೀಣ ಜನಪದ ಕಲೆ, ಹಾಡು, ಸಂಸ್ಕೃತಿಗೆ ಹಂತಿಯ ಮೂಲಕ ಪ್ರೋತ್ಸಾಹ ನೀಡಿದರು.

ವಾರದಿಂದಲೇ ಹಂತಿ ಮಾಡುವ ಸ್ಥಳವನ್ನು ನೀರು, ಹೊಟ್ಟು, ಸೆಗಣಿಯಿಂದ ವೃತ್ತಾಕಾರದಲ್ಲಿ ಗಟ್ಟಿ ಮಾಡಿಡಲಾಗಿತ್ತು. ಮಧ್ಯದಲ್ಲಿ ಮೇಟಿ ಎಂದು ಕರೆಯುವ ಒಂದ ಗಟ್ಟಿ ಕಂಬವನ್ನು ನೆಟ್ಟು ಮೇಟಿಯ ಸುತ್ತ ಜೋಳದ ಬೆಳೆಯ ಅಂದಾಜಿನಲ್ಲಿ ಜೋಳದ ದಂಟಿನಿಂದ ಖಣ ನಿರ್ಮಿಸಿದ್ದರು. ಚೌಕಾಕಾರದ ಒಡ್ಡು (ಕಂಕಿ ಪಡಿ) ನಿರ್ಮಿಸಲಾಗುತ್ತದೆ. ಖಣದಲ್ಲಿ ಜೋಳದ ತೆನೆಗಳನ್ನು ಕೊಯ್ದು ರಾಶಿ ಹಾಕಿ ಹಂತಿ ಮಾಡಿದರು.

ರಾತ್ರಿ ಚಂದ್ರನ ಬೆಳಕಿನಲ್ಲಿ ಖಣಕ್ಕೆ, ಎತ್ತಿಗೆ ಪೂಜೆ ಸಲ್ಲಿಸಿ, ಖಣದ ಒಳಗೆ ಸಾಲಾಗಿ ಎತ್ತುಗಳನ್ನು ಹಗ್ಗದಿಂದ ಮೇಟಿಗೆ ಕಟ್ಟಿ ಸುತ್ತಲು ತಿರುಗಿಸುತ್ತಾ, ಹಂತಿ ಪ್ರಾರಂಭಿಸಿದರು. ಜನಪದ ಹಂತಿ ಹಾಡು, ಕೋಲಾಟ, ಕೋಲು ತಿಗುಗಿಸುವದು (ಪಟ್ಟೆ ತಿರುವದು), ತಮಟೆ.ಡೊಳ್ಳು, ಶಯನಾಯಿ, ರಾತ್ರಿಯಿಡಿ ಜನಪದ ಸಂಸ್ಕೃತಿಯ ಕಾರ್ಯಕ್ರಮ ನಡೆದವು.

ಬೆಳಕು ಹರಿಯುವ ಮುನ್ನ ಜೋಳದ ಕಾಳು ಖಣದಲ್ಲಿ ತುಂಬಿರುತ್ತವೆ. ಅವುಗಳನ್ನು ಹಲ್ಲಿ (ಮೂರು ಕಾಲಿನ ಸ್ಟೂಲ್) ಮೇಲೆ ನಿಂತು ಮರದಿಂದ ಹಾಳಿಗೆ ಅಡ್ಡಲಾಗಿ ತೂರುವ ಮೂಲಕ ಹೊಟ್ಟು, ಕಾಳನ್ನು ಬೇರ್ಪಡಿಸಲಾಯಿತು.

ಹಂತಿಯಲ್ಲಿ ಪಾಲ್ಗೊಂಡ ಭಕ್ತರು, ರೈತರು, ಜನಪದ ಕಲಾವಿದರಿಗೆ, ಸಜ್ಜಕ, ಅನ್ನ, ಸಾಂಬಾರ, ಕುದಿಸಿದ ಗೆಣಸಿನ ಊಟ ರಾತ್ರಿಯಿಡಿ ವ್ಯವಸ್ಥೆ ಮಾಡಲಾಗಿತ್ತು. ಹಂತಿಯಲ್ಲಿ ತಮಟೆ, ಚಿಟ್ಟ ಹಲಗಿ, ಶಯನಾಯಿ ವಾದನ,ಹಿರಿಯರು ಹಂತಿ ಪದಗಳನ್ನು ಹಾಡು ಜನಮನಸೆಳೆದರು. ಇಳಿ ವಯಸ್ಸಿನವರು ಕೋಲು ತಿರುಗಿಸುವ ಮೂಲಕ ಗಮನ ಸೆಳೆದರೆ, ಯುವಕರು ಕೋಲಾಟ ಹಾಕಿದರು. ಅಕ್ಕನ ಬಳಗದಿಂದ ಭಜನೆ ಇಡೀ ರಾತ್ರಿ ಜೋಳದ ಹಂತಿಗೆ ಮೆರಗು ತಂದರು. ಪೂಜ್ಯ ಹಿರಗಪ್ಪ ತಾತನವರು ಅವರಿದ್ದಲ್ಲಿಗೆ ಹೋಗಿ ಸತ್ಕರಿಸಿ ಆಶೀರ್ವದಿಸಿದರು. 30 ವರ್ಷದಿಂದ ಮರೆತು ಹೋಗಿದ್ದ ಜೋಳದ ಹಂತಿ ಶ್ರೀಮಠದಿಂದ ಐದು ವರ್ಷದಿಂದ ನಡೆಸುತ್ತಿದ್ದು, ಅದಕ್ಕೆ ಭೋಜಲಿಂಗೇಶ್ವರ ಶರಣರ ಕೃಪೆಯಿಂದ ಸಾಧ್ಯವಾಗಿದೆ. ಭಕ್ತರು ಜೋಳದ ಹಂತಿ ಮಾಡುವದಾಗಿ ಮುಂದೆ ಬಂದಾಗ, ಅವರ ಆಕಾಂಕ್ಷೆಗೆ ಸಹಕಾರ ನೀಡಿದ್ದೇನೆ.

- ಹಿರಗಪ್ಪ ತಾತನವರು, ಪೀಠಾಧಿಪತಿ, ಭೋಜಲಿಂಗೇಶ್ವರ ಸಂಸ್ಥಾನ ಮಠ ಸೂಗೂರ (ಎನ್)

25-30 ವರ್ಷದ ಯುವಕರಿಗೆ ಜೋಳದ ಹಂತಿ ಬಗ್ಗೆ ಗೊತ್ತೆ ಇಲ್ಲ, ನಾವು ಹಿರಿಯರಿಂದ ಈ ಬಗ್ಗೆ ಕೇಳಿದ್ದೇವು. ಕಳೆದ ಮೂರು ವರ್ಷದಿಂದ ಪ್ರತ್ಯಕ್ಷವಾಗಿ ನೋಡುತ್ತಿದ್ದೇನೆ. ಯಂತ್ರಗಳಿಂದಾಗುವ ಪರಿಸರ ಹಾನಿಗಿಂತ ಪರಿಸರ ಸ್ನೇಹಿ, ಜಾನಪದ ಕಲೆ, ಸಂಸ್ಕøತಿಯ ಉಳುವಿನ ಹಂತಿ ಅಪ್ಯಾಯಮಾನವಾಗಿದೆ.

- ಮಲ್ಲಿಕಾರ್ಜುನ ಹಡಪದ, ಸೂಗೂರ ಗ್ರಾಮದ ಯುವಕ.