ಸಾರಾಂಶ
ಹಾನಗಲ್ಲ: ನೆನಗುದಿಗೆ ಬಿದ್ದಿದ್ದ ಮಾವು ಬೆಳೆಗಾರರ ಕನಸಿನ ಮಾವು ಸಂಸ್ಕರಣ ಘಟಕ ಸ್ಥಾಪನೆಯ ಪ್ರಕ್ರಿಯೆ ಮತ್ತೆ ಮರುಜೀವ ಪಡೆದುಕೊಂಡಿದ್ದು ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಸಿದ್ದರಾಮಯ್ಯ ಬರಗಿಮಠ ಹಾನಗಲ್ಲ ತಾಲೂಕಿನ ಎಳವಟ್ಟಿ ಬಳಿ ಗುರುತಿಸಲಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಗುರುವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಕೈಗೊಂಡ ಅವರು, ಈ ಯೋಜನೆ ಈಗ ಅನುಮೋದನೆ ಹಂತದಲ್ಲಿದೆ. ಹಾನಗಲ್ಲ ತಾಲೂಕಿನಲ್ಲಿರುವ ೩೨೦೦ ಹೆಕ್ಟೇರ್‌ಗೂ ಅಧಿಕ ಇರುವ ಮಾವು ಫಸಲಿಗೆ ಸಕಾಲಿಕವಾಗಿ, ಉತ್ತಮ ಬೆಲೆ ಸಿಗಲು ಸಾಧ್ಯವಿದೆ. ಹಾವೇರಿ ಜಿಲ್ಲೆಯೂ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಲ್ಲಿಯೂ ಮಾವು ಬೆಳೆಯುತ್ತಿದ್ದು ಇದು ರೈತರ ಪಾಲಿಗೆ ವರದಾನವಾಗಲಿದೆ ಎಂದರು.
ಮಾವು ಮಾತ್ರವಲ್ಲದೆ ಶುಂಟಿ, ಹಲಸು, ಬಾಳೆ, ಪಪ್ಪಾಯಿ, ಚಿಕ್ಕು ಬೆಳೆಗಳನ್ನೂ ಕೂಡ ಖರೀದಿಸುವ ಸಾಧ್ಯತೆ ಹೆಚ್ಚಿದೆ. ಈ ಬೆಳೆಗಳನ್ನು ಬಳಸಿ ಜಾಮ್, ಚಿಪ್ಸ, ಉಪ್ಪಿನಕಾಯಿ, ತಂಪು ಪಾನೀಯ, ಹಪ್ಪಳ ಸೇರಿದಂತೆ ವಿವಿಧ ತಿನಿಸುಗಳನ್ನು ಸಿದ್ಧಪಡಿಸುವ ಯೋಜನೆ ಇದಾಗಿದೆ. ಅಲ್ಲದೆ ಈ ಭಾಗದ ಸಾವಿರಾರು ಜನರಿಗೆ ಕೃಷಿಯೇತರ ಉದ್ಯೋಗ ನೀಡಲು ಸಾಧ್ಯ.
ಸಾರ್ವಜನಿಕ ಸಹಭಾಗಿತ್ವದಲ್ಲಿ ಖಾಸಗಿ ಉದ್ಯಮಿಗಳ ಮೂಲಕ ಈ ಸಂಸ್ಕಾರಣಾ ಘಟಕ ಅಂದಾಜು ೩೦ ಕೋಟಿ ವೆಚ್ಚದಲ್ಲಿ ನಿರ್ಮಿಸಬಹುದಾಗಿದೆ. ಸರಕಾರದಲ್ಲಿ ಈ ಯೋಜನೆ ಅನುಮೋದನೆ ಹಂತದಲ್ಲಿದ್ದು ಶೀಘ್ರ ಯೋಜನೆ ಜಾರಿಗೆ ಬರುವ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು.ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ತಾಂತ್ರಿಕ ಸಹಾಯಕ ಭುವನೇಶ್ವರ, ಸಹಾಯಕ ತೋಟಗಾರಿಕಾ ಅಧಿಕಾರಿ ಕೋಟೆಪ್ಪ ಸಂಕಣ್ಣನವರ, ಮೃತ್ಯುಂಜಯ ಹಿರೇಮಠ ಈ ಸಂದರ್ಭದಲ್ಲಿದ್ದರು.