ಇಂದಿನಿಂದ 5 ದಿನಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕ ದಕ್ಷಿಣ ಕನ್ನಡ ಭೇಟಿ

| Published : Dec 07 2024, 12:35 AM IST / Updated: Dec 07 2024, 11:33 AM IST

ಇಂದಿನಿಂದ 5 ದಿನಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕ ದಕ್ಷಿಣ ಕನ್ನಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಡಿ.6ರಂದು ರಾತ್ರಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ಸಂಘನಿಕೇತನದಲ್ಲಿ ವಾಸ್ತವ್ಯ. ಡಿ.7ರಂದು ಬೆಳಗ್ಗೆ ಮಂಗಳೂರು ನಗರದಲ್ಲಿ ಪ್ರಭಾತ್‌ ಶಾಖೆಯೊಂದಕ್ಕೆ ಭೇಟಿ. ಬಳಿಕ ಕಾರ್ಯಕರ್ತರ ವೈಯಕ್ತಿಕ ಭೇಟಿ. ಸಂಜೆ 7 ಗಂಟೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕ್ರೀಡೋತ್ಸದಲ್ಲಿ ಭಾಗಿಯಾಗಲಿದ್ದಾರೆ.

  ಮಂಗಳೂರು  : ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಕರ್ನಾಟಕ ಪ್ರಾಂತ ಪ್ರವಾಸ ಕೈಗೊಳ್ಳುತ್ತಿದ್ದು, ಇದರ ಅಂಗವಾಗಿ ಡಿ.7 ರಿಂದ 11ರ ವರೆಗೆ ಐದು ದಿನಗಳ ಕಾಲ ದ.ಕ. ಜಿಲ್ಲೆಯ ಭೇಟಿ ಕೈಗೊಳ್ಳುತ್ತಿದ್ದಾರೆ. 

ನಗರದ ಸಂಘನಿಕೇತನದಲ್ಲಿ ವಾಸ್ತವ್ಯ ಮಾಡುವ ಅವರು ಡಿ.7ರಂದು ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯುವ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸಂಘನಿಕೇತನದ ನೂತನ ಕಟ್ಟಡವನ್ನು ಅಧಿಕೃತ ಲೋಕಾರ್ಫಣೆಗೊಳಿಸಿದ ಬಳಿಕ ಪ್ರಾಂತ ಪ್ರಚಾರಕರ ಬೈಠಕ್‌, ಪ್ರಾಂತ ಕಾರ್ಯಕಾರಿಣಿ ಮಂಡಳಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪುತ್ತೂರಿನಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿಣಿ ಸಭಾ ಹೊರತುಪಡಿಸಿದರೆ ಪ್ರಾಂತ ಪ್ರವಾಸದ ವೇಳೆ ಸರಸಂಘಚಾಲಕರೊಬ್ಬರು ಕರಾವಳಿಯಲ್ಲಿ ಐದು ದಿನಗಳ ಕಾಲ ವಾಸ್ತವ್ಯ ಹೂಡುತ್ತಿರುವುದು ಇದೇ ಮೊದಲು.

ಏನೇನು ಕಾರ್ಯಕ್ರಮ?:

ಡಿ.6ರಂದು ರಾತ್ರಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ಸಂಘನಿಕೇತನದಲ್ಲಿ ವಾಸ್ತವ್ಯ. ಡಿ.7ರಂದು ಬೆಳಗ್ಗೆ ಮಂಗಳೂರು ನಗರದಲ್ಲಿ ಪ್ರಭಾತ್‌ ಶಾಖೆಯೊಂದಕ್ಕೆ ಭೇಟಿ. ಬಳಿಕ ಕಾರ್ಯಕರ್ತರ ವೈಯಕ್ತಿಕ ಭೇಟಿ. ಸಂಜೆ 7 ಗಂಟೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕ್ರೀಡೋತ್ಸದಲ್ಲಿ ಭಾಗಿಯಾಗಲಿದ್ದಾರೆ. ಡಿ.8ರಂದು ಬೆಳಗ್ಗೆ ಮಂಗಳೂರಿನಲ್ಲಿ ಶಾಖೆಗೆ ಭೇಟಿ, ಕಾರ್ಯಕರ್ತರಿಗೆ ಬೌದ್ಧಿಕ್‌ ವರ್ಗ ನಡೆಯಲಿದ್ದು, ಇದರಲ್ಲಿ ಸಂಘಪರಿವಾರದ ವಿವಿಧ ಕ್ಷೇತ್ರದ ಮಂದಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಸಂಘನಿಕೇತನದ ನೂತನ ಕಟ್ಟಡ ಅಧಿಕೃತ ಲೋಕಾರ್ಪಣೆಗೊಳ್ಳಲಿದೆ.

ಡಿ.9ರಂದು ಬೆಳಗ್ಗೆ ಪ್ರಾಂತ ಪ್ರಚಾರಕರ ಬೈಠಕ್‌, ಡಿ.10ರಂದು ಪ್ರಾಂತ ಕಾರ್ಯಕಾರಿಣಿ ಮಂಡಳಿ ಸಭೆ ನಡೆಯಲಿದೆ. ಪ್ರಾಂತ ಮಟ್ಟದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಆರ್‌ಎಸ್‌ಎಸ್‌ಗೆ 100 ವರ್ಷ ಹಿನ್ನೆಲೆಯಲ್ಲಿ ಪಂಚ ಪರಿವರ್ತನೆ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಸಾಮರಸ್ಯ, ಕುಟುಂಬ ಪ್ರಬೋಧನ, ಪರ್ಯಾವರಣ(ಪರಿಸರ), ನಾಗರಿಕ ಕರ್ತವ್ಯ ಹಾಗೂ ಸ್ವದೇಶಿ ಚಿಂತನೆಗಳಿಗೆ ಒತ್ತು ನೀಡುವ ದಿಶೆಯಲ್ಲಿ ಚಿಂತನ, ಮಂಥನ ನಡೆಯಲಿದೆ. 2025 ಅಕ್ಟೋಬರ್‌ನಿಂದ 2026 ವರೆಗೆ ಒಂದು ವರ್ಷ ಕಾಲ ನಡೆಯುವ ಸಂಘದ ಶತಾಬ್ದಿ ಆಚರಣೆಗೆ ಸಂಬಂಧಿಸಿ ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ಹಾಗೂ ಶಾಖಾ ವಿಸ್ತರಣೆ ಬಗ್ಗೆ ಸರಸಂಘಚಾಲಕರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಲ್ಲಡ್ಕ ಕ್ರೀಡೋತ್ಸವ ಹೊರತುಪಡಿಸಿದರೆ ಬೇರೆಲ್ಲ ಕಾರ್ಯಕ್ರಮಗಳು ಆಂತರಿಕವಾಗಿ ನಡೆಯಲಿದ್ದು, ಆಹ್ವಾನಿತರಿಗೆ ಮಾತ್ರ ಪ್ರವೇಶ ಇರಲಿದೆ.

ಮೋಹನ್‌ ಭಾಗವತ್‌ ಮಂಗಳೂರಿಗೆ ಆಗಮನ

ಮಂಗಳೂರು: ಆರ್‌ಎಸ್‌ಎಸ್ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ ಅವರು ಶುಕ್ರವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ೬ ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾ. ಮೋಹನ್ ಭಾಗವತ್ ಅವರನ್ನು ಸಂಘದ ಪ್ರಾಂತ ಪ್ರಚಾರಕ ಗುರುಪ್ರಸಾದ್, ಪ್ರಾಂತ ಸಹ ಕಾರ್ಯವಾಹ ಪಿ.ಎಸ್. ಪ್ರಕಾಶ್ ಮತ್ತಿತರ ಹಿರಿಯರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಝಡ್ ಪ್ಲಸ್ ಭದ್ರತೆಯೊಂದಿಗೆ ಅವರು ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನಕ್ಕೆ ತೆರಳಿದರು. ಸಂಘದ ಹಿರಿಯರೊಂದಿಗೆ ಮಾತುಕತೆ ನಡೆಸಿದರು.