ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಕಲ್ಯಾಣ ಕರ್ನಾಟಕದ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ಸಡಗರ ಸಂಭ್ರಮದಿಂದ ಶುಕ್ರವಾರ ಸಂಜೆ ಜರುಗಿತು.ಶಿವರಾತ್ರಿ ಕಳೆದು ಬಿಸಿಲುಗಾಲ ಆರಂಭವಾದ ಹಿನ್ನೆಲೆ ನೆತ್ತಿ ಸುಡುವ ಬಿಸಿಲಿನಲ್ಲಿಯೂ ಭಕ್ತ ಸಮೂಹ ತಂಡೋಪತಂಡವಾಗಿ ಅಬ್ಬೆತುಮಕೂರಿನೆಡೆಗೆ ಧಾವಿಸಿ ಬರುತ್ತಿದ್ದರು. ಬಸ್ಸು, ಕಾರು, ಜೀಪು ಮತ್ತು ಆಟೋಗಳಲ್ಲಿ ಬರುವವರು ಒಂದೆಡೆಯಾದರೆ, ಶಹಾಪುರ, ಸುರಪುರ, ಗುರುಮಠಕಲ್, ಸೇಡಂ, ಚಿತ್ತಾಪೂರ, ಕಲಬುರಗಿ ಸೇರಿ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಅಸಂಖ್ಯಾತ ಭಕ್ತರು ಪಾದಯಾತ್ರೆ ಮೂಲಕ ಅಬ್ಬೆತುಮಕೂರಿಗೆ ಧಾವಿಸಿ ಬರುತ್ತಿದ್ದರು.
ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ ಸರಿಯಾಗಿ ಸಂಜೆ 6.30ಗಂಟೆಗೆ ರಥವನ್ನೇರಿ ಚಾಲನೆ ನೀಡುವುದೇ ತಡ, ಭಕ್ತ ವೃಂದ “ವಿಶ್ವಾರಾಧ್ಯ ಮಹಾರಾಜ ಕೀ ಜೈ”, “ಗಂಗಾಧರ ಮಹಾರಾಜ ಕೀ ಜೈ” ಎಂಬ ಮುಗಿಲು ಮುಟ್ಟವ ಜಯಘೋಷ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು. ನೆರೆದ ಭಕ್ತ ಸಮೂಹ ಕಾರಿಕಾ, ಉತ್ತುತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು, ಭಕ್ತಿಯಿಂದ ಕೈ ಜೋಡಿಸಿ, ನಮಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ಆರಾಧ್ಯ ದೈವದಲ್ಲಿ ಬೇಡಿಕೊಂಡರು.ಕಲ್ಯಾಣ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಆಧ್ಯಾತ್ಮಿಕ ಕೇಂದ್ರ ಜಾಗೃತ ಸ್ಥಾನವೆಂದು ಖ್ಯಾತವಾದ ಸಿದ್ಧ ಸಂಸ್ಥಾನದ ಶ್ರೀ ವಿಶ್ವಾರಾಧ್ಯರ ಜಾತ್ರೆಯೆಂದರೆ ಕರ್ನಾಟಕ ಮಾತ್ರವಲ್ಲ ನೆರೆಯ ಆಂಧ್ರ-ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದು ಕೃತಾರ್ಥರಾಗುತ್ತಾರೆ. ಅಂತೆಯೇ ರಥೋತ್ಸವದಲ್ಲಿ ಲಕ್ಷಾವಧಿ ಭಕ್ತರು ಸೇರಿ ನಾಡಿನ ಹರ-ಗುರು-ಚರಮೂರ್ತಿಗಳು, ರಾಜಕೀಯ ಮುತ್ಸದ್ಧಿಗಳು, ಅನುಭಾವಿಗಳು ಪಾಲ್ಗೊಂಡು, ರಥೋತ್ಸವವನ್ನು ಸಾಕ್ಷೀಕರಿಸಿದರು.
ಗುರುವಾರ ಸಂಜೆ ಶ್ರೀಮಠದ ಕೈಲಾಸ ಕಟ್ಟೆಯ ಹತ್ತಿರ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ ನೂರಾರು ಸಾಧು ಸಂತರ ಮಧ್ಯೆ ಧುನಿ ಪೂಜೆ ನೆರವೇರಿಸುವುದರೊಂದಿಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಲ್ಲಿ ನೆರೆದ ಎಲ್ಲ ಸಾಧು ಸಂತರಿಗೆ ಶ್ರೀಗಳು ಕಪನಿಗಳನ್ನು ನೀಡಿದರು.ಶುಕ್ರವಾರ ಬೆಳಗ್ಗೆ ಸೂರ್ಯೋದಯವಾಗುತ್ತಲೇ ಶ್ರೀ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ಜರುಗಿತು. ನಂತರ ಹನ್ನೊಂದು ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ. ಪಲ್ಲಕ್ಕಿ ಉತ್ಸವ ಮೆರವಣಿಗೆ ಮಂಗಲವಾದ್ಯಗಳೊಂದಿಗೆ ಪುರವಂತರ ಸೇವೆಸಮೇತ ಗ್ರಾಮದಲ್ಲಿ ನಡೆಯಿತು.
ಪ್ರವಚನಕಾರರಾದ ಅಮರೇಶ್ವರ ಶಾಸ್ತ್ರಿಗಳು ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮೀಜಿ ನೇತೃತ್ವದಲ್ಲಿ ಶ್ರೀ ವಿಶ್ವಾರಾಧ್ಯರ ಪುರಾಣ ಮಂಗಲಗೊಳಿಸಿದರು. ತರುವಾಯ ಶ್ರೀಗಳು ತೇರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ, ಕಳಸವನ್ನು ಆರೋಹಣ ಮಾಡಿದರು.ಹಲಗೆ, ಬಾಜಾ-ಭಜಂತ್ರಿ, ಡೊಳ್ಳು ಮುಂತಾದ ಮಂಗಲವಾದ್ಯಗಳ ಸದ್ದು, ಭಕ್ತರ ಸಂಭ್ರಮ, ಪುರವಂತರ ಸೇವೆ ಇಡೀ ಅಬ್ಬೆತುಮಕೂರು ಗ್ರಾಮವನ್ನು ಭಕ್ತಿಯ ಬೀಡನ್ನಾಗಿಸಿತ್ತು. ದಾಸೋಹ ಮನೆ ಸೇರಿ ಶಹಬಾದ ಮತ್ತು ನಾಯ್ಕಲ್ ಭಕ್ತರ ದಾಸೋಹಗಳು ಜಾತ್ರೆಗೆ ಆಗಮಿಸಿದ ಭಕ್ತರಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದರು. ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.
ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಬೆಂಗಳೂರು ವಿಭೂತಿ ಡಾ. ಮಹಾಂತಲಿಂಗ ಶಿವಾಚಾರ್ಯರು, ಡಾ. ಶಿವಾನಂದ ಮಹಾಸ್ವಾಮೀಜಿ ಸೊನ್ನ, ಶಹಾಪುರದ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಸಿದ್ಧರಾಮಪುರದ ಚಿದಾನಂದ ತಾತನವರು, ಸೇಡಂನ ಶ್ರೀ ಸದಾಶಿವ ಸ್ವಾಮಿಗಳು, ಗೋಲಪಲ್ಲಿಯ ವರದಾನೇಶ್ವರ ಸ್ವಾಮಿಗಳು ಮತ್ತು ಸೇಡಂನ ಹಾಲಪ್ಪಯ್ಯ ಸ್ವಾಮಿಗಳು, ಗುಂಡಗುರ್ತಿಯ ರುದ್ರಮುನಿ ಶಿವಾಚಾರ್ಯರು, ಮುನಿಂದ್ರ ಸ್ವಾಮೀಜಿ ಹಲಕರ್ಟಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೆಡಗಿಮದ್ರಾ, ಶಿವಮೂರ್ತಿ ಸ್ವಾಮೀಜಿ ದೇವಾಪೂರ, ಕೊಟ್ಟೂರೇಶ್ವರ ಶಿವಾಚಾರ್ಯರು ಎಲ್ಹೇರಿ ಸೇರಿದಂತೆ ಪೂಜ್ಯರು ಇದ್ದರು.