ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ವತಂತ್ರ ಸ್ಪರ್ಧೆ

| Published : Mar 16 2024, 01:45 AM IST / Updated: Mar 16 2024, 11:54 AM IST

ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ವತಂತ್ರ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲಿ ಪಕ್ಷ ಉಳಿಸಲು, ಒಂದೇ ಕುಟುಂಬದ ಹಿಡಿತದಿಂದ ಪಕ್ಷವನ್ನು ರಕ್ಷಿಸಲು, ಹಿಂದುತ್ವ ಉಳಿಸಲು, ರಾಜ್ಯಾದ್ಯಂತ ನೊಂದ ಕಾರ್ಯಕರ್ತರ ಧ್ವನಿಯಾಗಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಘೋಷಣೆ ಮಾಡಿದರು.

ನಗರದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ತಮ್ಮ ಬೆಂಬಲಿಗರ, ಹಿತೈಷಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹದ ಬಳಿಕ ಅವರು ಮಾತನಾಡಿದರು. ನಾನು ಮೋದಿ ವಿರುದ್ಧ ಇಲ್ಲ.

ನನ್ನ ಪ್ರಾಣ ಇರುವ ತನಕ ಮೋದಿ ಮತ್ತು ಹಿಂದುತ್ವ ನನ್ನ ಉಸಿರಾಗಿರುತ್ತದೆ. ಬಿಜೆಪಿ ಈಗಲೂ ನನ್ನ ತಾಯಿಯ ಹಾಗೆ. ಆದರೆ, ಕೆಲವರು ನನ್ನ ತಾಯಿಯ ಕುತ್ತಿಗೆ ಹಿಸುಕುವುದನ್ನು ಹೇಗೆ ನೋಡುತ್ತಾ ಕುಳಿತಿರಲಿ?. 

ಇದನ್ನು ಕೇಂದ್ರ ನಾಯಕರು ಗಮನಿಸಿ, ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ಸರಿಪಡಿಸುವ ಯತ್ನ ನಡೆಸಲಿ ಎನ್ನುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ಹಿಂದುತ್ವದ ಪ್ರಖರ ಪ್ರತಿಪಾದಕರಾದ ನಳಿನ್‌ಕುಮಾರ್ ಕಟೀಲ್, ಸದಾನಂದಗೌಡ, ಸಿ.ಟಿ. ರವಿ, ಪ್ರತಾಪ್ ಸಿಂಹ ಮತ್ತು ನಾನು ಸೇರಿದಂತೆ ಅನೇಕ ನಾಯಕರಿಗೆ, ಕಾರ್ಯಕರ್ತರಿಗೆ ಅನ್ಯಾಯ ಮಾಡಲಾಗುತ್ತಿದೆ. 

ಒಂದೇ ಕುಟುಂಬ ರಾಜ್ಯದಲ್ಲಿ ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಇದನ್ನು ನೋಡುತ್ತಾ ಹೇಗೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಗೆ ಅಲ್ಲಿನ ಕಾರ್ಯಕರ್ತರು ಗೋಬ್ಯಾಕ್ ಎಂಬ ಚಳವಳಿ ಮಾಡಿದರು. ಬಳಿಕ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೊಡಿಸಿದರು. 

ಕಾಂಗ್ರೆಸ್‌ ಗೆ ಹೋಗಿ ವಾಪಸ್‌ ಬಂದ ಜಗದೀಶ್ ಶೆಟ್ಟರ್ ಗೆ ಬೆಳಗಾವಿಯಿಂದ ಟಿಕೆಟ್ ಎಂದು ಯಡಿಯೂರಪ್ಪ ಪ್ರಕಟಿಸಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ಪ್ರಕಟಿಸುವ ಮುನ್ನವೇ ಯಡಿಯೂರಪ್ಪ ಹೇಗೆ ಟಿಕೆಟ್‌ ಪ್ರಕಟಿಸುತ್ತಾರೆ. 

ನನ್ನ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸಿ, ಗೆಲ್ಲಿಸುವ ಭರವಸೆ ನೀಡಿದ್ದ ಯಡಿಯೂರಪ್ಪ ಬಳಿಕ ಯಾಕೆ ಟಿಕೆಟ್‌ ಕೊಡಿಸಲಿಲ್ಲ. ಹಾವೇರಿಯಲ್ಲಿ ಬೊಮ್ಮಾಯಿ ಅವರು ತಮಗೆ ಸ್ಫರ್ಧಿಸುವ ಇಚ್ಛೆಯಿಲ್ಲ ಎಂದು ಹೇಳಿದ್ದರು. ಆದರೂ, ಅವರನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಕುಟುಂಬ ರಾಜಕಾರಣವನ್ನು ಮೋದಿ ವಿರೋಧಿಸಿದ್ದರು. ಆದರೆ, ಯಡಿಯೂರಪ್ಪ ತಮ್ಮ ಒಬ್ಬ ಪುತ್ರನನ್ನು ಎಂ.ಪಿ.ಯಾಗಿ, ಒಬ್ಬ ಪುತ್ರನನ್ನು ಶಾಸಕರಾಗಿ ಮತ್ತು ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರು ಎಂದರು.