ಸಾರಾಂಶ
ಕನ್ನಡಪ್ರಭ ವಾರ್ತೆ ಅಫಜಲ್ಪುರ
ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗ್ರಾಮ ದೇವತೆ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಸಂಭ್ರಮದಿಂದ ಜರುಗಿತು. ಜಾತ್ರೆಗೆ ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.ಶಿವಾಜಿನಗರದ ಭಕ್ತಾದಿಗಳಿಂದ ನಂದಿಕೋಲು ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ನಡೆಯಿತು. ಯಲ್ಲಮ್ಮ ದೇವಿಯ ಬಾಸಿಂಗ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ಸಂಚರಿಸಿ ರಾತ್ರಿ 9 ಗಂಟೆಗೆ ದೇವಿಯ ಮಂದಿರಕ್ಕೆ ಆಗಮಿಸಿತು. ರಾತ್ರಿ 10 ಗಂಟೆಗೆ ಆಳಂದ ತಾಲೂಕಿನ ಮಾದನಹಿಪ್ಪರಗಾದ ಅಂಜಲಿಬಾಯಿ ಹಾಗೂ ಸಂಗಡಿಗರಿಂದ ಚೌಡಕಿ ಆಟ ಚೌಡಕಿ ಪದಗಳು ಜರುಗಿದವು.23ರಂದು ಗುರುವಾರ ಪೌರ್ಣಮಿ ದಿವಸ ಬೆಳಿಗ್ಗೆ ಪಡಸಾವಳಗಿಯ ಶಂಭುಲಿಂಗ ಶಿವಾಚಾರ್ಯರಿಂದ ದೇವಿಯ ರುದ್ರಾಭಿಷೇಕ ಜರುಗಿತು 7ಗಂಟೆಗೆ ದೇವಿಯ ವಸ್ತ್ರಾಭರಣ 9 ಗಂಟೆಯಿಂದ ದೇವಿಗೆ ನೈವೇದ್ಯ ಅರ್ಪಣೆ ಸಂಜೆ 4 ಗಂಟೆಗೆ ನವಿಲು ಕುಣಿತ ಕುದುರೆ ಕುಣಿತ ಕರಡಿ ಕುಣಿತ ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಭೀಮಾ ನದಿಯಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿತು. 5 ಗಂಟೆಗೆ ಬಾಸಿಂಗ ಮೆರವಣಿಗೆಯೊಂದಿಗೆ ದೇವಿಯ ಪಲ್ಲಕ್ಕಿ ಸ್ವಾಗತಿಸಲಾಯಿತು. 7ರಿಂದ ರಾತ್ರಿ 9 ಗಂಟೆಯವರೆಗೆ ಮದ್ದು ಸುಡುವ ಕಾರ್ಯಕ್ರಮ ರಾತ್ರಿ 10.30ಕ್ಕೆ ಗೀಗೀ ಪದಗಳು ಹಾಗೂ ಗರುಡ ರಾಜ್ಯದಲ್ಲಿ ಘಟ ಸರ್ಪ ನಾಟಕ ಜರುಗಿತು. 24ರಂದು ಶುಕ್ರವಾರ ಸಂಜೆ 5 ಗಂಟೆಗೆ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ ಕುಸ್ತಿಗಳು ಜರುಗಿದವು.
ಮನಸೆಳೆದ ಜಗಜಟ್ಟಿಗಳ ಕಾಳಗ: ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪಂದ್ಯಾವಳಿಗೆ ಸುತ್ತಲಿನ ಪೈಲ್ವಾನರು ಸೇರಿದಂತೆ ವಿವಿಧ ತಾಲೂಕಿನ ಸ್ಪರ್ಧಿಗಳು ಆಗಮಿಸಿದ್ದರು. ಕುಸ್ತಿಪಟುಗಳ ಕಾಳಗ ನೆರದಿದ್ದ ಜನರನ್ನು ರೋಮಾಂಚನಗೊಳಿಸಿತು. ಪಂದ್ಯದಲ್ಲಿ ಗೆದ್ದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು.