ಸಾರಾಂಶ
ಕಾರ್ಕಳ: ಕನಸು, ಛಲ, ಸ್ವಸಾಮರ್ಥ್ಯ, ಆತ್ಮವಿಶ್ವಾಸ ಇದ್ದವರು ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಗುರುವಾರ ಇಲ್ಲಿನ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ಕರಾವಳಿ ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಇದರ ವಾರ್ಷಿಕ ಸಹಮಿಲನ - ಪ್ರೇರಣಾ ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಯುವಜನತೆ ಉದ್ಯೋಗಕ್ಕಾಗಿ ವಿದೇಶದ ದಾರಿ ಹುಡುಕುತ್ತಿದ್ದು, ಅದರ ಬದಲು ನಮ್ಮ ದೇಶದಲ್ಲಿಯೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸ್ವ ಉದ್ಯಮಕ್ಕೆ ಲಭ್ಯವಿರುವ ಹಣಕಾಸು ನೆರವಿನ ಯೋಜನೆಗಳನ್ನು ಉಪಯೋಗಿಸಿ ಯಶಸ್ವಿಯಾಗಬೇಕು. ಅದಕ್ಕೆ ಪೂರಕವಾದ ವಿದ್ಯಾಭ್ಯಾಸವನ್ನು ಪಡೆದಾಗ ಮಾತ್ರ ಅದನ್ನು ಪಡೆಯಲು ಸಾಧ್ಯವಿದೆ.
ಕೆಸಿಸಿಸಿಐ ಸಂಘಟನೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದು ಇದರೊಂದಿಗೆ ವರ್ಷಕ್ಕೊಮ್ಮೆ ಉದ್ಯೋಗ ಮೇಳ ಆಯೋಜಿಸುವ ಮೂಲಕ ಉದ್ಯೋಗ ಅರಸುವ ಯುವಕರಿಗೆ ಸಹಕಾರ ನೀಡಬೇಕು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಸ್ ಐ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಭೆಯ ಧರ್ಮಾಧ್ಯಕ್ಷ ವಂ. ಹೇಮಚಂದ್ರ ಕುಮಾರ್ ಮಾತನಾಡಿ, ಸಂಸ್ಥೆ ಹುಟ್ಟು ಹಾಕುವುದು ಸುಲಭ ಆದರೆ ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೆಸಿಸಿಸಿಐ ಯಶಸ್ವಿಯಾಗಿರುವುದು ಅಭಿನಂದನೀಯ ಸಂಗತಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಫ್ರಾನ್ಸಿಸ್ ಡಿ''ಸೋಜಾ ಪಲಿಮಾರು ಅವರಿಗೆ ವರ್ಷದ ಉದ್ಯಮಿ, ಲವೀಟಾ ಅಂದ್ರಾದೆ ಉಡುಪಿ ಇವರಿಗೆ ಮಹಿಳಾ ಉದ್ಯಮಿ, ಅರುಣ್ ಸುಶೀಲ್ ಕೋಟ್ಯಾನ್ ಸುಭಾಷ್ ನಗರ ಇವರಿಗೆ ಯುವ ಉದ್ಯಮಿ ಹಾಗೂ ಡಾ. ಜೋಸೆಫ್ ಲೋಬೊ ಶಂಕರಪುರ ಇವರಿಗೆ ಪ್ರಗತಿ ಪರ ಕೃಷಿಕ ಪ್ರೇರಣಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಂಘಟನೆಯ ಅಧ್ಯಕ್ಷ ಸಂತೋಷ್ ಡಿಸಿಲ್ವಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ವಂ|ಆಲ್ಬನ್ ಡಿಸೋಜಾ, ಸಂಘಟನೆಯ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಕೋಶಾಧಿಕಾರಿ ಮ್ಯಾಕ್ಷಿಮ್ ಸಲ್ಡಾನಾ ಉಪಸ್ಥಿತರಿದ್ದರು. ಜಿತೇಂದ್ರ ಫುರ್ಟಾಡೊ ಸ್ವಾಗತಿಸಿ ಆಲ್ವಿನ್ ಕ್ವಾಡ್ರಸ್ ವಂದಿಸಿದರು. ತೆಲ್ಮಾ ಪಿಂಟೊ ಪ್ರಾರ್ಥನೆ ನೆರವೇರಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.