ಸಾರಾಂಶ
ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಮಲೆನಾಡು ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಭಾರತಿ ಡಯಾಸ್ ಅವರಿಗೆ ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೇವಾ ಜೀವನದಲ್ಲಿ ಉನ್ನತ ಯಶಸ್ಸು ಸಾಧಿಸುವುದು ಸಾರ್ಥಕ ಭಾವನೆ ಮೂಡಿಸುತ್ತದೆ ಎಂದು ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಭಾರತಿ ಡಯಾಸ್ ಅವರಿಗೆ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಮಲೆನಾಡು ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತಿ ಡಯಾಸ್ ಅವರು ಶಿವಮೊಗ್ಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಮುಂದಿನ ಸೇವಾ ಅವಧಿಯಲ್ಲಿ ಉನ್ನತ ಸ್ಥಾನ ತಲುಪುವಂತಾಗಲಿ ಎಂದು ಆಶಿಸಿದರು.
ಶಿವಮೊಗ್ಗ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಭಾರತಿ ಡಯಾಸ್ ಅವರು 8 ವರ್ಷಗಳಲ್ಲಿ ಜಿಲ್ಲಾ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ದಿನಾಚರಣೆ, ಮಹನೀಯರ ಜಯಂತಿ ಕಾರ್ಯಕ್ರಮ, ಜಿಲ್ಲಾ ಪುರಸ್ಕಾರ, ನಿಪುಣ ಪರೀಕ್ಷಾ ಶಿಬಿರಗಳಲ್ಲಿ, ಸಂಸ್ಥೆಯ ಗಣತಿ ಹೆಚ್ಚಿಸುವುದರಲ್ಲಿ, ಜಿಲ್ಲಾ ಮಟ್ಟದ ವಯಸ್ಕ ನಾಯಕರ ತರಬೇತಿ ಮತ್ತು ಮಕ್ಕಳ ಶಿಬಿರಗಳನ್ನು ಸಂಘಟಿಸುವುದರಲ್ಲಿ ಭಾಗವಹಿಸಿದ್ದರು. ಇತ್ತೀಚಿಗೆ ರಾಜ್ಯ ಸಂಸ್ಥೆ ಮಾರ್ಗದರ್ಶನದಂತೆ ನಡೆದ ಒವೈಎಂಎಸ್ ಮತ್ತು ಪ್ರತಿಯೊಬ್ಬ ಸದಸ್ಯರು ಪಡೆದುಕೊಳ್ಳಬೇಕಾದ ಯುಐಡಿ ಸಂಖ್ಯೆ ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿ ಜಿಲ್ಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ ಎಂದರು.ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್ ಮಾತನಾಡಿ, ವೃತ್ತಿಯಲ್ಲಿ ನಾವು ಮಾಡಿದ ಸೇವೆ ಸದಾ ಹಸಿರಾಗಿರುತ್ತದೆ ಹಾಗೂ ಹಲವಾರು ಹೊಸ ಹೊಸ ಸ್ಕೌಟ್ಸ್ ಮತ್ತು ಗೈಡರ್ಸ್ ಗಳಿಗೆ ನಿರಂತರ ಮಾರ್ಗದರ್ಶನ ನೀಡಿ ಅವರನ್ನ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಕೀರ್ತಿ ಭಾರತಿ ಡಯಾಸ್ ಅವರಿಗೆ ಸೇರುತ್ತದೆ ಎಂದರು.
ಅಭಿನಂದನೆ ಸ್ವೀಕರಿಸಿ ಭಾರತಿ ಡಯಾಸ್ ಮಾತನಾಡಿದರು. ಜಿಲ್ಲಾ ಸಂಸ್ಥೆ ವತಿಯಿಂದ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು. ಜಿಲ್ಲಾ ಗೈಡ್ಸ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ಜಿಲ್ಲಾ ಜಂಟಿ ಕಾರ್ಯದರ್ಶಿ ಲಕ್ಷ್ಮೀ ರವಿ, ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್, ಜಿಲ್ಲಾ ಸಂಸ್ಥೆ ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಕಾತ್ಯಾಯಿನಿ, ಕೇಂದ್ರ ಸ್ಥಾನಿಕ ಆಯುಕ್ತ ಕೆ. ರವಿ, ಬಿಂದು ವಿಜಯ್‌ಕುಮಾರ್, ಗೈಡರ್ ಶಾಂತಮ್ಮ, ಕ್ರಿಸ್ಟಿನ ಶೀಲಾ, ಸ್ಕೌಟರ್ ಕೃಷ್ಣ ಸ್ವಾಮಿ, ಚಂದ್ರಶೇಖರ್, ಕಚೇರಿ ಮೇಲ್ವಿಚಾರಕ ದೇವಯ್ಯ, ಕುಮಾರ್, ಭರತ ಇತರರು ಇದ್ದರು.