ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ: ನೀರು ಕಲುಷಿತ

| Published : Jul 01 2024, 01:56 AM IST

ಸಾರಾಂಶ

ಹುಮನಾಬಾದ್‌ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳ ರಾಸಾಯನಿಕದಿಂದ ನೀರು ಕಲುಷಿತ. ಈ ನೀರು ಬೀದರ್‌ ಸೇರಿದಂತೆ ಮತ್ತಿತರ ನಗರ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಗೂ ಸಾಗುವುದು ಆತಂಕ ತಂದಿದ್ದರೂ ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ ಬಿಡುವದರಿಂದ ನೀರು, ಪರಿಸರ ಮಾಲಿನ್ಯವಾಗುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮಾತ್ರ ಮೌನ ವಹಿಸಿದ್ದಾರೆ.

ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿ 65ರ ಮೇಲೆ ಇರುವ ಗಡವಂತಿ ಮೂಲಕ ಕಾರಂಜಾ ಜಲಾಶಯಕ್ಕೆ ಸಂಪರ್ಕ ಹೊಂದಿರುವ ಸೇತುವೆಯ ಚೆಕ್‌ ಡ್ಯಾಮ್‌ದಲ್ಲಿ ಇದೀಗ ರಾಸಾಯನಿಕ ತ್ಯಾಜ್ಯ ಸಂಗ್ರಹಗೊಳ್ಳುತ್ತಿದ್ದು. ಮಳೆ ಬಿದ್ದಾಗ ನೇರವಾಗಿ ಕಾರಂಜಾ ಜಲಾಶಯಕ್ಕೆ ಸೇರಲಿದೆ.

ಇದರ ಸಂಪರ್ಕಕ್ಕೆ ಬರುವ ಪ್ರತಿಯೊಂದು ಗ್ರಾಮದ ಹಳ್ಳಗಳಲ್ಲಿ ಇರುವ ಜಲಚರಗಳ ಮಾರಣಹೋಮ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಅಷ್ಟೇ ಅಲ್ಲ ಈ ನೀರು ಬೀದರ್‌ ಸೇರಿದಂತೆ ಮತ್ತಿತರ ನಗರ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಗೂ ಸಾಗುವುದು ಆತಂಕ ತಂದಿದ್ದರೂ ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ.

ವಿಷೇಶ ಅಂದರೆ ಕೈಗಾರಿಕಾ ಪ್ರದೇಶದ ಹಿಂಬದಿಯಲ್ಲಿ ಕಾರ್ಖಾನೆಯೊಂದಕ್ಕೆ ಸಂಬಂಧಿತ ಬಾವಿಯೊಂದರಲ್ಲಿ ರಾಸಾಯನಿಕ ನೀರು ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲದಲ್ಲೂ ನೀರು ಕುಲಷಿತಗೊಳ್ಳುತ್ತಿದ್ದೆ. ಈ ಕುರಿತು ಶಾಸಕ ಡಾ. ಸಿದ್ದು ಪಾಟೀಲ್‌ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು ಯಾವುದೇ ಕ್ರಮವಾಗಿಲ್ಲ.

ಮಾಣಿಕನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡವಂತಿ, ಮೋಳಕೇರಾ ಗ್ರಾಮದ ಪರಿಸರದ ನೀರಿನ ಮಟ್ಟ ಕಲುಷಿತಗೊಂಡಿದ್ದು, ಈ ಬಗ್ಗೆ ಹಲವಾರು ಬಾರಿ ಜಿಲ್ಲಾ ಪರಿಸರ ಮತ್ತು ಮಾಲಿನ್ಯ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಅಳಲು:

ಹಳ್ಳದಲ್ಲಿ ಸಂಗ್ರಹವಾಗಿರುವ ನೀರು ಕೆಂಪು ಕೆನೆಗಟ್ಟಿದಂತೆ ಮತ್ತು ಕಪ್ಪು ವರ್ಣದ್ದಾಗಿರುವುದನ್ನು ಕಂಡು ಜನರು ಭಯಗೊಂಡಿದ್ದಾರೆ. ಕೊಳಚೆ ನೀರಿನಿಂದಾಗಿ ಸುತ್ತಲಿನ ಸುಮಾರು 400 ಎಕರೆ ಪ್ರದೇಶದ ಜಮೀನಿನ ನೀರು ಕೂಡ ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ಗೋಳು ತೋಡಿಕೊಂಡಿದ್ದಾರೆ.

ಕೊಳವೆ ಬಾವಿ ನೀರು ಕೂಡ ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿನ ನೀರನ್ನು ಪರೀಕ್ಷಿಸಿದಾಗ ಶೇ.45ರಷ್ಟು ರಾಸಾಯನಿಕ ಮಿಶ್ರಿತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಇಂತಹ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ, ಶಾರೀರಿಕ ವಿಕಲಾಂಗತೆಯಾಗುವ ಭೀತಿ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ಅಗತ್ಯ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಗ್ರಾಮದ ಪ್ರಮುಖರು ಎಚ್ಚರಿಕೆ ನೀಡಿದ್ದರು. ಅದಾಗ್ಯೂ ಅಧಿಕಾರಿಗಳಿಂದಾಗಲಿ ಜನಪ್ರತಿನಿಧಿಗಳಿಂದಾಗಲಿ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಮಾಣಿಕನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಸರದಲ್ಲಿನ ಕೆಲ ಕಾರ್ಖಾನೆಗಳಿಂದ ಈ ಪ್ರದೇಶದಲ್ಲಿನ ನೀರಿನ ಮಟ್ಟವು ಕಲುಷಿತವಾಗುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಜಿಲ್ಲಾ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ಕ್ರಮಕೈಗೊಳ್ಳದೆ ಇರುವುದು ಅನುಮಾನಕ್ಕೆ ದೂಡಿದೆ. ಕೂಡಲೇ ಹಳ್ಳಕ್ಕೆ ರಾಸಾಯನಿಕ ತಾಜ್ಯ ಹರಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಾಣಿಕನಗರ ಗ್ರಾಪಂ ವ್ಯಾಪ್ತಿಯ ಮಾಣಿಕನಗರ, ಗಡವಂತಿ, ಮೋಳಕೇರಾ, ಬಸಂತಪೂರ ಗ್ರಾಮಸ್ಥರ ಆಗ್ರಹವಾಗಿದೆ.