ಅರಸು ಸಮುದಾಯ ಭವನ ಆವರಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾರ್ವಜನಿಕ ಕೆಲಸದಲ್ಲಿ ನಾನು, ನನ್ನದು ಎಂಬುದನ್ನು ಮೊದಲು ಬಿಡಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ತೇಗೂರಿನಲ್ಲಿ ಭಾನುವಾರ ಅರಸು ಸಮುದಾಯ ಭವನದ ಆವರಣದಲ್ಲಿ 25 ಲಕ್ಷ ರು. ವೆಚ್ಚದಲ್ಲಿ‌ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕ ಕೆಲಸದಲ್ಲಿ ನಾನು, ನನ್ನದು ಎಂಬುದನ್ನು ಮೊದಲು ಬಿಡಬೇಕು. ನಮ್ಮದು ಎಂಬ ಭಾವನೆ ವ್ಯಕ್ತವಾದಾಗ ಆ ಕಾರ್ಯ ಯಶಸ್ವಿಯಾಗಿ ಮುನ್ನಡೆಯಲಿದೆ. ಆ ನಿಟ್ಟಿನಲ್ಲಿ ತೇಗೂರಿನ ಅರಸು ಸಮಾಜ ಒಗ್ಗಟ್ಟಿನಿಂದ ಪ್ರತಿಯೊಂದು ಕೆಲಸದಲ್ಲೂ ಶಕ್ತಿ ಪ್ರದರ್ಶಿಸಿದರೆ ಉನ್ನತ ಮಟ್ಟಕ್ಕೆ ಕೊಂಡೊಯ್ಯ ಬಹುದು ಎಂದು ತಿಳಿಸಿದರು.ರಾಜ್ಯದಲ್ಲಿ ಅರಸು ಜನಾಂಗ ಹಿಂದುಳಿದ ವರ್ಗವಾದರೂ, ಇಡೀ ರಾಜ್ಯವನ್ನು ಆಳಿದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಸಾಧನೆಯಿಂದ ನಾಡಿನಾದ್ಯಂತ ಅತ್ಯಂತ ದೊಡ್ಡ ಸಮಾಜವಾಗಿ ಹೊರಹೊಮ್ಮಿದೆ. ಸಮಾದಲ್ಲಿ ಯಾವುದೇ ಜನಾಂಗ ಒಂದು ಭವನ ಅಥವಾ ಕಟ್ಟಡ ನಿರ್ಮಿಸುವುದು ಒಂದೇ ಸಮಾಜಕ್ಕಲ್ಲ. ಎಲ್ಲಾ ವರ್ಗದ ಜನರು ಬಳಸಿಕೊಳ್ಳಲು ಎಂದರು.

ಇಂದಿಗೂ ಮೈಸೂರಿನ ಕನ್ನಂಬಾಡಿ ಕಟ್ಟೆ ನಿರ್ಮಾತೃ ಎಂದರೆ ದಿಢೀರನೇ ನೆನಪಾಗುವುದು ಸರ್. ಎಂ.ವಿ.ವಿಶ್ವೇಶ್ವರಯ್ಯ. ಆದರೆ ಅಂದಿನ ಕಾಲದಲ್ಲಿ ಮೈಸೂರು ಅರಸರು ಕನ್ನಂಬಾಡಿ ಕಟ್ಟೆ ನಿರ್ಮಿಸಲು ಮನೆಯ ಚಿನ್ನಾಭರಣವನ್ನು ಒತ್ತೆ ಇಟ್ಟು ನಿರ್ಮಿಸಿರುವುದು ಕೆಲವೇ ಕೆಲಸವಿಗೆ ಗೊತ್ತಿದೆ ಎಂದರು.


ನಾಡಿನ ಏಳಿಗೆಗಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಉಳುವವನೆ ಭೂ ಒಡೆಯ ಕಾನೂನು ರೂಪಿಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದರು. ಅದರಂತೆ ರಾಜ್ಯದ ಹಿಂದುಳಿದ ವರ್ಗದ ನಾಯಕ ದೇವರಾಜ್‌ ಅರಸು ಸಾಧನೆ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದ ಯೋಜನೆಗಳು ನಾಡಿನ ಬೆಳವಣಿಗೆಗೆ ಸ್ಪೂ ರ್ತಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಅರಸು ಸಂಘದ ಅಧ್ಯಕ್ಷ ಕೆ.ಜೆ.ಮಂಜುನಾಥ್ ರಾಜ್ ಅರಸ್ ಮಾತನಾಡಿ ಭವನದ ಆವರಣದಲ್ಲಿ ಕಟ್ಟಡ ನಿರ್ಮಿಸಲು ಪದಾಧಿಕಾರಿಗಳು ಶಾಸಕರ ಸಮೀಪ ₹10 ಲಕ್ಷ ಅನುದಾನಕ್ಕೆ ಕೋರುವ ಆಲೋಚನೆಯಿತ್ತು. ಆದರೆ ಶಾಸಕರು ₹25 ಲಕ್ಷ ರು. ಅನುದಾನ ಒದಗಿಸಿವ ಮೂಲಕ ಸಮಾಜದ ಒಳಿತಿಗೆ ಶ್ರ ಮಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅರಸು ಸಂಘದ ಉಪಾಧ್ಯಕ್ಷ ಮೋಹನ್‌ಅರಸ್, ವನರಾಜ್‌ ಅರಸ್, ಮಂಜುನಾಥ್‌ ಅರಸ್, ಕಾರ್ಯದರ್ಶಿ ಆನಂದ್‌ ಅರಸ್, ಸಹ ಕಾರ್ಯದರ್ಶಿ ಕೃಷ್ಣಕುಮಾರ್ ಅರಸ್, ಕುಮಾರ್ ಅರಸ್, ಖಜಾಂಚಿ ಲೋಕೇಶ್‌ಅರಸ್, ನಿರ್ದೇಶಕರು ಮೈಲಾರಿ ಅರಸ್, ಲಕ್ಷ್ಮಣ್‌ ಅರಸ್, ಜಯರಾಮ್‌ ಅರಸ್, ವೇಣುಗೋಪಾಲ್‌ ಅರಸ್, ಉಮೇಶ್‌ಅರಸ್, ಮುಖಂಡರಾದ ಜಯರಾಜ್‌ ಅರಸ್, ಕಾಂತರಾಜ್‌ ಅರಸ್, ದಿನೇಶ್‌ ಅರಸ್, ಮಲ್ಲರಾಜು ಅರಸ್ ಮತ್ತಿತರರು ಉಪಸ್ಥಿತರಿದ್ದರು.