ಬಿಸಿಲಿನ ಝಳಕ್ಕೆ ನಲುಗಿದ್ದ ಜನತೆಗೆ ತಂಪೆರದ ಮಳೆ

| Published : Jun 09 2024, 01:36 AM IST

ಸಾರಾಂಶ

ವಿಪರೀತ ಸೆಖೆ, ಉಷ್ಣ ಗಾಳಿಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಒಂದೇ ಸಮನೆ ಸುರಿದ ಸೋನೆ ಮಳೆಯಿಂದ ತಂಪೆರದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಕಳೆದ ವಾರದಿಂದ ಆಗೊಮ್ಮೆ,ಈಗೊಮ್ಮೆ ಕಾಣಿಸಿಕೊಳ್ಳುತ್ತಾ ಶುರುವಾದ ಮಳೆ ಹಿಂದಿನ ಮೂರು ದಿನಗಳಿಂದ ಜೋರಾಗಿದೆ. ಶನಿವಾರ ಬೆಳಗ್ಗೆಯಿಂದಲೂ ಒಂದೇ ಸಮನೆ ಸುರಿದ ಸೋನೆ ಮಳೆಯಿಂದ ಜಿಲ್ಲಾ ಕೇಂದ್ರದಲ್ಲಿ ಮಲೆನಾಡಿನ ಹವಾಮಾನ ಸೃಷ್ಟಿಯಾಗಿತ್ತು. ಇದರಿಂದಾಗಿ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಎದುರಿಸಬೇಕಾಯಿತು. ವಿಪರೀತ ಸೆಖೆ, ಉಷ್ಣ ಗಾಳಿಯಿಂದ ಕಂಗೆಟ್ಟಿದ್ದ ಜಿಲ್ಲೆ, ನಗರದಲ್ಲಿ ಸದ್ಯ ನಿರಂತರ ಮೋಡ ಮುಸುಕಿದ ವಾತಾವರಣದ ಪರಿಣಾಮ ಚಳಿ ಶುರುವಾಗಿದೆ. ಶನಿವಾರ ಜೋರು ಮಳೆಯಾಗದಿದ್ದರೂ ಇಡೀ ದಿನ ಮೋಡ ಮುಸುಕಿದ ವಾತಾವರಣವಿತ್ತು. ಆಗಾಗ ಸೂರ್ಯನ ಹೊಂಬಿಸಿಲು ಕಾಣಿಸಿಕೊಂಡರೂ ಆಕಾಶದಲ್ಲಿ ದಟ್ಟ ಮೋಡಗಳು ಮುಸುಕಿದ್ದವು. ಹಿಂದಿನ ದಿನ ಬಂದ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದ ರಸ್ತೆ ಗುಂಡಿಗಳನ್ನು ದಾಟಿಕೊಂಡು ಹೋಗಲು ವಾಹನ ಸವಾರರು ಹರಸಾಹಸ ಪಟ್ಟರು. ಬೆಳಗಿನ ತರಗತಿಗೆ ಬಿಳಿ ಸಮವಸ್ತ್ರ ತೊಟ್ಟಿದ್ದ ವಿದ್ಯಾರ್ಥಿಗಳು ಮಳೆನೀರು ಸಿಡಿಯದಂತೆ ವಾಹನಗಳಿಂದ ಅಂತರ ಕಾಯ್ದುಕೊಂಡು ಸಾಗಬೇಕಾಯಿತು.

ಈವರೆಗೆ ಬಿರುಬಿಸಿಲಿನ ಜೊತೆಗೆ ಸೆಖೆಯು ಕೂಡ ವಿಪರೀತವಾಗಿದ್ದರಿಂದ ಮನೆ, ಕಚೇರಿಗಳಲ್ಲಿ ಫ್ಯಾನ್, ಎಸಿ ಇಲ್ಲದೆ ಇರುವುದು ಅಸಾಧ್ಯವೆಂಬಂತಿತ್ತು. ಅಷ್ಟಾಗಿ ಗಾಳಿ ಕೂಡ ಬೀಸದ ಕಾರಣ ಬಿಸಿಲಿನಲ್ಲಿ ಒಂದಷ್ಟು ದೂರ ನಡೆಯುವುದೂ ಕಷ್ಟವಾಗಿತ್ತು. ಇದರಿಂದ ಬೇಡಿಕೆಗಿಂತ ಬಳಕೆ ಹೆಚ್ಚಾಗಿ, ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿತ್ತು. ಇದೀಗ ಮೋಡ ಮುಸುಕಿದ ವಾತಾವರಣದಲ್ಲಿ ಸಹಜ ಸ್ಥಿತಿ ಮರಳುತ್ತಿದೆ. ಸುಮಾರು 2 ತಿಂಗಳ ಕಾಲ ಬೇಸಿಗೆ ಬಿಸಿಲಿನ ಪ್ರಕೋಪಕ್ಕೆ ನಲುಗಿ ಹೋಗಿದ್ದ ಜನರು ಮಳೆ ವಾತಾವರಣದಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.ಮಳೆ ಮಾತ್ರವಲ್ಲದೆ, ದಿನವೆಲ್ಲಾ ದಟ್ಟ ಮೋಡಗಳು ಆವರಿಸಿರುವುದರಿಂದ ಮೈ ನಡುಗುವಂತಾಗಿದೆ. ಬಟ್ಟೆ ರಾಶಿಗಳ ಮಧ್ಯೆ ಸೇರಿರುವ ಸ್ವೆಟರ್, ರುಮಾಲುಗಳನ್ನು ಜನ ತಡಕಾಡುತ್ತಿದ್ದಾರೆ. ಛಳಿಯ ವಾತಾವರಣದಿಂದ ವಿದ್ಯಾರ್ಥಿಗಳಿಗೆ ವಾರಾಂತ್ಯದ ಖುಷಿಯೂ ಇಲ್ಲವಾಗಿದೆ. ಜಿಟಿಜಿಟಿ ಸುರಿಯುತ್ತಿರುವ ಮಳೆಯಿಂದಾಗಿ ಹೊರಗೆಲ್ಲೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ರಸ್ತೆಗಳಲ್ಲಿ ಆಡುತ್ತಿರುವ ಮಕ್ಕಳನ್ನು ಪಾಲಕರು ಮನೆಯೊಳಗೆ ಕರೆದುಕೊಳ್ಳುತ್ತಿದ್ದಾರೆ. ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆಯ ವಸ್ತ್ರ ತೊಡಿಸುತ್ತಿದ್ದಾರೆ.ಬೇಸಿಗೆ ದಿನಗಳಲ್ಲಿ 39 ಡಿಗ್ರಿ ಸೆಲ್ಷಿಯಸ್ ವರೆಗೆ ತಲುಪಿದ್ದ ಉಷ್ಣಾಂಶವು ಸದ್ಯ 23 ಡಿಗ್ರಿ ಸೆಲ್ಷಿಯಸ್‌ಗೆ ಇಳಿಕೆಯಾಗಿದೆ. ಗಾಳಿಯ ವೇಗ 32 ಕಿ.ಮೀ ಪ್ರತಿ ಗಂಟೆ ಹಾಗೂ ಆರ್ದ್ರತೆ ಶೇ.88ರಷ್ಟು ದಾಖಲಾಗಿದೆ. ಇದರಿಂದಾಗಿ ಮೈ ಮರಗಟ್ಟುವಷ್ಟು ಚಳಿಯ ವಾತಾವರಣ ಸೃಷ್ಟಿಯಾಗಿದೆ. ಸೆಖೆಯಿಂದ ಬಸವಳಿದಿದ್ದ ಜನರು ಈಗ ತಂಪಾದ ಹವಾಮಾನದಲ್ಲಿನ ಚಳಿ ನಿಭಾಯಿಸಲು ಮುಂದಾಗಿದ್ದಾರೆ. ಋತುಗಳೆಲ್ಲಾ ವ್ಯತ್ಯಾಸವಾಗುತ್ತಿದ್ದು, ಮಳೆಗಾಲದಲ್ಲಿ ಈ ಮಟ್ಟಿಗೆ ಚಳಿ ಯಾವತ್ತೂ ಕಂಡಿರಲಿಲ್ಲ ಅಂತಾ ಮಾತಾಡಿಕೊಳ್ಳುತ್ತಿದ್ದಾರೆ.