ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದಲ್ಲಿ ಆದಷ್ಟು ಬೇಗ ಕಲಾಮಂದಿರ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ಸೇವಾ ಸಮಿತಿ ಹಾಗೂ ಸವಿತಾ ಸಮಾಜದ ವತಿಯಿಂದ ನಡೆದ ಸದ್ಗುರು ಶ್ರೀ ತ್ಯಾಗರಾಜರ ಮೂರನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಕಚೇರಿ ತೆರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಸಮುದಾಯದವರಿಗೂ ಅನುಕೂಲವಾಗುವಂತೆ ಕಲಾಮಂದಿರ ನಿರ್ಮಿಸಲಾಗುವುದು. ಇದರಲ್ಲೇ ಎಲ್ಲಾ ಸಮುದಾಯವರು ಕಚೇರಿ ಮಾಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಸವಿತಾ ಸಮಾಜದ ಜಿಲ್ಲಾ ಮಾಜಿ ಅಧ್ಯಕ್ಷ ಪ್ರತಾಪ್ ಮಾತನಾಡಿ, ನಮ್ಮ ಸಮಾಜದವರು ಮದುವೆ ಹಾಗೂ ಇತರೆ ಶುಭ ಕಾರ್ಯಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಶಾಸಕರು ಭವನ ನಿರ್ಮಿಸಲು ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಮಂಡ್ಯ ಶಾಸಕ ಪಿ.ರವಿಕುಮಾರ್ ಅವರು, ಸವಿತಾ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿಕೊಡಲು ಭರವಸೆ ನೀಡಿದ್ದಾರೆ. ಜತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮುದಾಯ ಭವನ ಇವೆ. ಆದರೆ ಪಾಂಡವಪುರದಲ್ಲಿ ಮಾತ್ರ ಇಲ್ಲ ಎಂದರು.ಬೆಳಗ್ಗೆ ಮಂಗಳವಾದ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಶ್ರೀ ತ್ಯಾಗರಾಜರ ಮೂರ್ತಿ ಮೆರವಣಿಗೆ ನಡೆಸಲಾಯಿತು.
ತದನಂತರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮೈಸೂರಿನ ಸವಿಗಾನ ಸಂಗೀತ ಶಾಲೆಯ ವಿಧೂಷಿ ಗಾಯಿತ್ರಿ ಸತ್ಯನಾರಾಯಣರವರ ಶಿಷ್ಯ ವೃಂದದವರಿಂದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಹಾಗೂ ವಿದ್ವಾನ್ ಹರೀಶ್ ಪಾಂಡವ್ ಅವರ ಸ್ಯಾಕ್ಷೋಫೋನ್, ದೂರದರ್ಶನ ಕಲಾವಿದ ವಿದ್ವಾನ್ ಪಿ.ಲೋಕೇಶ್ ಅವರ ಸಹ ಸ್ಯಾಕ್ಷೋಫೋನ್ ವಾದನ ಮತ್ತು ವಿದ್ವಾನ್ ಎಂ.ಆರ್.ಗಣೇಶ್ ಇತರರು ನುಡಿಸಿದ ಡೋಲು ಕಚೇರಿಯು ಎಲ್ಲರನ್ನೂ ತಲೆದೂಗುವಂತೆ ಮಾಡಿತು. ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆರ್.ಜಯರಾಂ, ಮಾಜಿ ಅಧ್ಯಕ್ಷ ಪ್ರತಾಪ್, ಮುಖಂಡರಾದ ಮಾಣಿಕ್ಯನಹಳ್ಳಿ ತಮ್ಮಣ್ಣ, ಅರಳಕುಪ್ಪೆ ಶಿವಕುಮಾರ್, ಸುಂಕಾತೊಣ್ಣೂರು ರಘು, ಜಯರಾಂ, ಲೋಕೇಶ್, ರಾಮಚಂದ್ರ, ಬೆಳ್ಳಾಳೆ ಲೋಕೇಶ್, ಕುಷನ್ ರವೀಂದ್ರಕುಮಾರ್, ಮೈಕ್ ಸೋಮಣ್ಣ, ಕೆನ್ನಾಳು ಬಸವರಾಜು, ನಾಗೇಂದ್ರ, ಕೇಶವಮೂರ್ತಿ, ತಿಮ್ಮನಕೊಪ್ಪಲು ಕುಮಾರ್, ಪ್ರತೀಶ್, ತಿಮ್ಮರಾಜು, ಕೆರೆತೊಣ್ಣೂರು ಅಭಿ, ಟೌನ್ ಅಧ್ಯಕ್ಷ ಸ್ವಾಮಿ, ಯುವ ಮುಖಂಡ ಮೂರ್ತಿ ಸೇರಿದಂತೆ ಇತರರಿದ್ದರು.