ಗ್ಯಾರಂಟಿ ಯೋಜನೆಗಳಿಂದ ನೊಂದವರ ಬದುಕಲ್ಲಿ ಸಂತಸದ ನಗು

| Published : Feb 10 2024, 01:50 AM IST / Updated: Feb 10 2024, 04:32 PM IST

ಸಾರಾಂಶ

ಕಾಂಗ್ರೆಸ್ ನೊಂದವರಿಗೆ ಆಧಾರ ಕಲ್ಪಿಸುವ ಪಕ್ಷವಾಗಿದ್ದು, ಈ ನೆಲೆಯಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳಿಂದ ನೊಂದವರ ಬದುಕಿನಲ್ಲಿ ನಗು ಮೂಡಿಸುವ ಕೆಲಸವಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ 

ಕಾಂಗ್ರೆಸ್ ನೊಂದವರಿಗೆ ಆಧಾರ ಕಲ್ಪಿಸುವ ಪಕ್ಷವಾಗಿದ್ದು, ಈ ನೆಲೆಯಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳಿಂದ ನೊಂದವರ ಬದುಕಿನಲ್ಲಿ ನಗು ಮೂಡಿಸುವ ಕೆಲಸವಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಜಿಲ್ಲಾ ಹಾಗೂ ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂಸಾರ ನಡೆಸುವವರು ಮಹಿಳೆಯರಾಗಿದ್ದರಿಂದ ಅವರಿಗೆ ಸಹಾಯ ಮಾಡುವ ಉದ್ದೇಶ ಈ ಎಲ್ಲ ಯೋಜನೆಗಳಲ್ಲಿದೆ ಎಂದರು.

ಚುನಾವಣೆಗೂ ಮುನ್ನ ಗ್ಯಾರಂಟಿ ಕಾರ್ಡ್‌ಗಳ ಮೂಲಕ ಪ್ರಣಾಳಿಕೆಯ ಎಲ್ಲ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿದ್ದರು. ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದ ಸರ್ಕಾರ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದೆ. 

ಗ್ಯಾರಂಟಿ ಯೋಜನೆಯ ಬಗ್ಗೆ ಕಮಿಟಿ ರಚಿಸಲಾಗಿದೆ. ಇದರ ಅಡಿಯಲ್ಲಿ ಯೋಜನೆಯ ಲಾಭ ಪಡೆದುಕೊಳ್ಳಲು ಆಗದವರಿಗೆ ಸಮರ್ಪಕ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಈ ಗ್ಯಾರಂಟಿ ಯೋಜನೆಗಳಿಂದ ಯಾರನ್ನೂ ಸೋಮಾರಿ ಮಾಡುತ್ತಿಲ್ಲ. ಬಡವರ ಕೈಯಲ್ಲಿ ಹಣ ಓಡಾಡುತ್ತಿದ್ದರೆ ಅರ್ಥವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಅದೇ ಶ್ರೀಮಂತರು ಹಣವನ್ನು ಬ್ಯಾಂಕುಗಳಲ್ಲಿ ಇಡುತ್ತಾರೆ. ದುಡಿಯುವ ಕೈಗಳನ್ನು ಬಲ ಪಡಿಸಲು ಈ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. 

ಕೇಂದ್ರ ಸರ್ಕಾರ ರಾಜ್ಯಕ್ಕೆ ತೀರಾ ಕಡಿಮೆ ಅನುದಾನ ನೀಡುತ್ತಿದ್ದರೂ ರಾಜ್ಯಸರ್ಕಾರ ಜನಮುಖಿ ಯೋಜನೆಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳುತ್ತಿದೆ. ಶಿಕ್ಷಣ ಇಲಾಖೆ ಮೂಲಕ ಈಗಾಗಲೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲಾಗುತ್ತಿದೆ. ಮುಂದಿನ ಹದಿನೈದು ದಿನದೊಳಗೆ ರಾಜ್ಯದ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿಮಾಲ್ಟ್ ಕೊಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಲೋಖಂಡೆ, ತಾಲೂಕು ಕಾರ್ಯನಿರ್ವಹಣಾಧಿಕಾರಿ ನಾಗೇಶ್ ಬ್ಯಾಲಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರಮೂರ್ತಿ, ಪೌರಾಯುಕ್ತ ಎಚ್.ಕೆ. ನಾಗಪ್ಪ, ನಗರಸಭೆ ಸದಸ್ಯರು ಹಾಜರಿದ್ದರು.

ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಆರ್.ಯತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಾವ್ಯ ನಿರೂಪಿಸಿದರು

₹5 ಲಕ್ಷ ಪರಿಹಾರ ಭರವಸೆ: ಮಂಗನಕಾಯಿಲೆಯಿಂದ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೆಎಫ್‌ಡಿಯಿಂದ ಮೃತಪಟ್ಟರೆ ಇದುವರೆಗೆ ₹2 ಲಕ್ಷ ಪರಿಹಾರ ಕೊಡಲಾಗುತ್ತಿತ್ತು. ಅದನ್ನು ₹5 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ - ಗೋಪಾಲಕೃಷ್ಣ ಬೇಳೂರು, ಶಾಸಕ, ಸಾಗರ ಕ್ಷೇತ್ರ