ಸಾರಾಂಶ
ಬಕ್ರೀದ್ ಅಂಗವಾಗಿ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಾಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ಹಾಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ನಡುವೆ ವಾಗ್ವಾದ
ಕನ್ನಡಪ್ರಭ ವಾತೆ ಗಂಗಾವತಿಬಕ್ರೀದ್ ಹಬ್ಬದ ಅಂಗವಾಗಿ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಾಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಹೆಚ್ಚುವರಿ ಎಸ್ಪಿ ಹೇಮಂತಕುಮಾರ ಡಿವೈಎಸ್‍ಪಿ ಸಿದ್ಧಪ್ಪಗೌಡ ಪಾಟೀಲ ಸಮ್ಮುಖದಲ್ಲಿ ಸಭೆ ನಡೆದಿತ್ತು.
ಸಭೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯದ ಹಾಗೂ ವಿವಿಧ ಜಾತಿ, ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು. ಹಾಲಿ, ಮಾಜಿ ಶಾಸಕರ ಬೆಂಬಲಿಗರು ಭಾಗವಹಿಸಿ ಶಾಂತಿಯುತ ಹಬ್ಬ ಆಚರಣೆಗೆ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಜನಾರ್ದನರೆಡ್ಡಿ ಆಪ್ತ ಅಲಿಖಾನ್ ಮಾತನಾಡಿ, ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂರೆಲ್ಲರೂ ಸೇರಿ ರಾಜಕೀಯ ರಹಿತವಾಗಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಾರೆ. ಆದರೆ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಶಾಸಕರಿಗೆ ಮಾತನಾಡುವ ಅವಕಾಶ ನೀಡುವುದರಿಂದ ಅವರು ಜನರಲ್ಲಿ ಗೊಂದಲ ಸೃಷ್ಟಿಸುವಂತ ಹೇಳಿಕೆ ನೀಡುತ್ತಾರೆ. ಹೀಗಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಲು ರಾಜಕೀಯ ಮುಖಂಡರಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು. ಇದರಿಂದ ಕೆರಳಿ ಕೆಂಡವಾದ ಇಕ್ಬಾಲ್ ಅನ್ಸಾರಿ ಬೆಂಬಲಿಗರಾದ ಎಸ್.ಬಿ.ಖಾದ್ರಿ, ಜೂಬೇರ್ ಮತ್ತಿತರರು ಅಲಿಖಾನ್ ಮಾತಿಗೆ ಆಕ್ಷೇಪ ಎತ್ತಿದರು. ಈ ವೇಳೆ ಮಾತಿನ ಚಕಮಕಿ ಜೋರಾಗಿ ಎರಡು ಗುಂಪಿನ ಮುಖಂಡರು, ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ಸಂದರ್ಭ ತಕ್ಷಣ ಮಧ್ಯಪ್ರವೇಶಿಸಿದ ಡಿವೈಎಸ್‍ಪಿ ಮತ್ತು ನಗರ ಮತ್ತು ಗ್ರಾಮೀಣ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಎರಡು ಗುಂಪಿನ ಮಾತಿನ ಚಕಮಕಿಗೆ ಬ್ರೇಕ್ ಹಾಕಿ ವಾತಾವರಣ ತಿಳಿಗೊಳಿಸಿ ಸಭೆ ಮೊಟಕುಗೊಳಿಸಿದರು.ಸಭೆಯಲ್ಲಿ ಉಪ ತಹಸೀಲ್ದಾರ, ತಾಪಂ ಇಒ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು