ಹುಬ್ಬಳ್ಳಿ: ಫಜಲ್‌ ಪಾರ್ಕಿಂಗ್‌ ಅನಾಥ

| Published : Jun 15 2024, 01:01 AM IST

ಸಾರಾಂಶ

ಹುಬ್ಬಳ್ಳಿಯ ಜನನಿಬಿಡ ಪ್ರದೇಶಗಳಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ 4.59 ಕೋಟಿ ವೆಚ್ಚದಲ್ಲಿ ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಫಜಲ್‌ ಪಾರ್ಕಿಂಗ್‌ ನಿರ್ಮಿಸಲಾಗಿದೆ. ಆದರೆ, ಮಾಹಿತಿಯ ಕೊರತೆಯಿಂದ ಸಮರ್ಪಕವಾಗಿ ಬಳಕೆಯಾಗದೇ ಬಿಕೋ ಎನ್ನುತ್ತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ನಗರದ ಜನನಿಬಿಡ ಪ್ರದೇಶಗಳಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ₹4.59 ಕೋಟಿ ವೆಚ್ಚದಲ್ಲಿ ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಫಜಲ್‌ ಪಾರ್ಕಿಂಗ್‌ ನಿರ್ಮಿಸಲಾಗಿದೆ. ಆದರೆ, ಮಾಹಿತಿಯ ಕೊರತೆಯಿಂದ ಸಮರ್ಪಕವಾಗಿ ಬಳಕೆಯಾಗದೇ ಬಿಕೋ ಎನ್ನುತ್ತಿದೆ.ನಗರದ ಚೆನ್ನಮ್ಮ ವೃತ್ತ ಹಾಗೂ ಹಳೆ ಬಸ್‌ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ಇಂದಿರಾ ಗಾಜಿನ ಮನೆಗೆ ಹಾಗೂ ಮಹಾತ್ಮ ಗಾಂಧಿ ಉದ್ಯಾನದ ವೀಕ್ಷಣೆಗೆ ಆಗಮಿಸುವವರ ಕಾರು ನಿಲುಗಡೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಇಲ್ಲಿ ಫಜಲ್‌ ಪಾರ್ಕಿಂಗ್‌ ನಿರ್ಮಾಣ ಮಾಡಿದೆ.

ಮಾಹಿತಿಯೇ ಇಲ್ಲ:

ಇಲ್ಲಿ ವಾಹನಗಳ ನಿಲುಗಡೆಗಾಗಿ ಫಜಲ್‌ ಪಾರ್ಕಿಂಗ್‌ ವ್ಯವಸ್ಥೆ ಇದೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ದೊರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಪಾರ್ಕಿಂಗ್‌ ವ್ಯವಸ್ಥೆಯ ಕುರಿತು ಯಾವುದೇ ನಾಮಫಲಕ, ಜನರಿಗೆ ತಿಳಿಸುವ ಸೈನ್‌ ಬೋರ್ಡ್‌ಗಳನ್ನು ಎಲ್ಲಿಯೂ ಹಾಕಿಲ್ಲ. ಉದ್ಯಾನದ ಪಕ್ಕದಲ್ಲಿರುವ ಜಾಗದಲ್ಲಿ ಅದರಲ್ಲೂ ಒಳಗಡೆ ಇರುವುದರಿಂದ ಜನರಿಗೆ ಗೊತ್ತೆ ಆಗುತ್ತಿಲ್ಲ. ಹಾಗಾಗಿ ಇದರ ಬಳಕೆಯೇ ಸರಿಯಾಗಿ ಆಗುತ್ತಿಲ್ಲ.

ಪಾರ್ಕಿಂಗ್‌ ಶುಲ್ಕವೂ ಕಡಿಮೆ:

ಇದರ ನಿರ್ವಹಣೆಗಾಗಿ ಕಳೆದ 2023ರ ಮಾರ್ಚ್‌ ತಿಂಗಳಲ್ಲಿ ಒಂದು ವರ್ಷದ ಕಾಲ ಖಾಸಗಿ ಸಂಸ್ಥೆಯಾದ ಆದರ್ಶ ಎಂಟರ್‌ ಪ್ರೈಸ್‌ರ್ಸ್‌ಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಟೆಂಡರ್‌ ಅವಧಿ ಪೂರ್ಣಗೊಂಡಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇವರ ಗುತ್ತಿಗೆ ಅವಧಿ ಮುಂದೂಡಲಾಗಿತ್ತು. ಇಲ್ಲಿ ಒಟ್ಟು 6 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಾರ್ಕಿಂಗ್‌ನಲ್ಲಿ ಒಟ್ಟು 37 ಕಾರ್‌ ನಿಲ್ಲಿಸುವ ವ್ಯವಸ್ಥೆಯಿದೆ. ಒಂದು ಕಾರಿಗೆ(12 ಗಂಟೆ) ಕೇವಲ ₹ 30 ನಿಗದಿಗೊಳಿಸಲಾಗಿದೆ. ನಿರ್ವಹಣೆ ಏನೋ ಸರಿಯಾಗಿಯೇ ಇದೆ. ಆದರೆ, ಮಾಹಿತಿಯ ಕೊರತೆಯಿಂದಾಗಿ ಇಲ್ಲಿಗೆ ವಾಹನಗಳು ಬರುತ್ತಿಲ್ಲ.

ಖುಲ್ಲಾ ಜಾಗದಲ್ಲೇ ಪಾರ್ಕಿಂಗ್‌:

ಪಾರ್ಕಿಂಗ್‌ ಲಾಟ್‌ ಬಳಿ ವಾಹನ ನಿಲ್ಲಿಸದಂತೆ ಕ್ರಮ ಸಹ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆಯೂ ಕೆಲವರು ಚಿತ್ರಮಂದಿರ ಬಳಿ ಇರುವ ಖುಲ್ಲಾ ಜಾಗದಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಉದ್ಯಾನಕ್ಕೆ ಹೆಚ್ಚು ಜನ ಬರುತ್ತಾರೆ. ಅಲ್ಲದೇ ನಗರದ ತೋಳನಕೆರೆ ಅಭಿವೃದ್ಧಿ ಮಾಡಿದ ದಿನದಿಂದ ಇಲ್ಲಿಗೆ ಬರುವ ಜನರ ಸಂಖ್ಯೆ ತುಂಬಾ ಕ್ಷೀಣಿಸಿದೆ.

ಕರೆ ಸ್ವೀಕರಿಸುವುದೇ ಇಲ್ಲ:

ಫಜಲ್‌ ಪಾರ್ಕಿಂಗ್‌ ವ್ಯವಸ್ಥೆಯ ಕುರಿತು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ಪಡೆದುಕೊಂಡಿರುವ ಆದರ್ಶ ಎಂಟರ ಪ್ರೈಜರ್ಸ್‌ನ ವ್ಯವಸ್ಥಾಪಕರಿಗೆ ಹತ್ತಾರು ಬಾರಿ ಕರೆ ಮಾಡಿದರೂ ಸಹ ಸೌಜನ್ಯಕ್ಕೂ ಮಾತನಾಡುವ ವ್ಯವಧಾನ ತೋರುತ್ತಿಲ್ಲ. ಇನ್ನು ಯಾರಾದರೂ ಇಲ್ಲಿನ ಸಮಸ್ಯೆ ಕುರಿತು ಕರೆ ಮಾಡಿದರೆ ಹೇಗೆ ಸ್ಪಂದಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.

ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರಿಸಿ

ಹುಬ್ಬಳ್ಳಿಯಲ್ಲಿ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಇಲ್ಲಿನ ಶಾಹ ಬಜಾರ, ದಾಜಿಬಾನ್ ಪೇಟೆ, ಕೊಪ್ಪಿಕರ ರಸ್ತೆ, ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಇಂತಹ ಫಜಲ್‌ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಿದರೆ ಅಲ್ಲಿನ ಪಾರ್ಕಿಂಗ್‌ ಸಮಸ್ಯೆ ಕಡಿಮೆಯಾಗುವುದು. ಹಾಗಾಗಿ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಫಜಲ್‌ ಪಾರ್ಕಿಂಗ್‌ ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬುದು ಹಲವರ ಅನಿಸಿಕೆಯಾಗಿದೆ.ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಫಜಲ್‌ ಪಾರ್ಕಿಂಗ್‌ ಜಾಗ ಯಾರಿಗೂ ಗೊತ್ತಾಗುವುದೇ ಇಲ್ಲ. ಶನಿವಾರ, ಭಾನುವಾರ ಹೊರತುಪಡಿಸಿದರೆ ಇಲ್ಲಿಗೆ ಕಾರು ಬರುವುದೇ ವಿರಳ. ಇದನ್ನು ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರಿಸಲಿ ಎಂದು ಸ್ಥಳೀಯ ನಿವಾಸಿ ಮಹೇಶ ಮೂಶಣ್ಣವರ ಹೇಳಿದ್ದಾರೆ.