ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ನಾನಾ ಯೋಜನೆ ರೂಪಿಸಿರುವ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಈಗಾಗಲೇ ವಿಶೇಷ ತರಗತಿ ಪ್ರಾರಂಭಿಸಿದೆ.ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗುತ್ತಿದ್ದಂತೆ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗುತ್ತಾರೆ. ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಪಾಸಾಗಲು ಅಗತ್ಯವಿರುವ ಕನಿಷ್ಠ ಅಂಕವನ್ನಾದರೂ ಗಳಿಸಲು ಸಾಧ್ಯವಾಗುವ ಉದ್ದೇಶದಿಂದ ಡಿಡಿಪಿಐ ಶ್ರೀಶೈಲ ಬಿರಾದರ ವಿಶೇಷ ಆಸಕ್ತಿ ವಹಿಸಿ ಅಂತಹ ಮಕ್ಕಳಿಗೆ ನಿತ್ಯವೂ ವಿಶೇಷ ತರಗತಿ ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ, ಅದರಲ್ಲೂ ಕಳಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಸಲಾಗುತ್ತಿದೆ.
7 ಸಾವಿರ ಹಿಂದುಳಿದ ವಿದ್ಯಾರ್ಥಿಗಳು:ಜಿಲ್ಲೆಯಲ್ಲಿ 24 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಕ್ಲಾಸ್ ಟೆಸ್ಟ್ ಆಧಾರದ ಮೇಲೆ ಎ, ಬಿ, ಸಿ ಎಂದು ಗುರುತಿಸಲಾಗಿದೆ. ಸಿ ವಿಭಾಗದಲ್ಲಿ 7 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಈ 7 ಸಾವಿರ ವಿದ್ಯಾರ್ಥಿಗಳಿಗೆ ನಿತ್ಯವೂ ತರಗತಿ ನಡೆಸಿ ಪಾಸಿಂಗ್ ಮಾರ್ಕ್ ಪಡೆಯುವ ಸಾಮರ್ಥ್ಯವನ್ನಾದರು ಪಡೆಯವಷ್ಟು ತಯಾರಿ ಮಾಡಲಾಗುತ್ತದೆ.
ಏನಿದು ವಿಶೇಷ ತರಗತಿ?ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ನಿತ್ಯವೂ ಶಾಲೆ ಪ್ರಾರಂಭವಾಗುವ ಮೊದಲು ಮತ್ತು ಶಾಲಾ ಅವಧಿ ಮುಗಿದ ನಂತರ ಒಂದು ಗಂಟೆಗಳ ಕಾಲ ವಿಶೇಷ ತರಗತಿ ನಡೆಸಲಾಗುತ್ತದೆ. ಹಾಗಂತ ಇವರಿಗೆ ಪಾಠ ಮಾಡುವುದಿಲ್ಲ. ಮನೆಯಲ್ಲಿ ಮಾಡಬೇಕಾದ ಅಭ್ಯಾಸವನ್ನೇ ಇಲ್ಲಿ ಮಾಡಿಸಲಾಗುತ್ತದೆ. ನಿತ್ಯವೂ ಒಂದು ವಿಷಯದ ಮೇಲೆ ಪರೀಕ್ಷೆಯಲ್ಲಿ ಬರಬಹುದಾದ ಮಾದರಿ ಪ್ರಶ್ನೋತ್ತರ ಬರೆಯುವ ಅಭ್ಯಾಸ ಮಾಡಿಸಲಾಗುತ್ತದೆ.
ಹೀಗೆ ಮನನ ಮಾಡಿಸುವುದು ಮತ್ತು ನಿತ್ಯವೂ ವಿಶೇಷ ಬೋಧನೆ ಮಾಡಿಸಿ ಪರೀಕ್ಷೆಗೆ ಸಿದ್ಧ ಮಾಡಲಾಗುತ್ತದೆ. ಪ್ರತಿ ನಿತ್ಯವೂ ಒಂದೊಂದು ವಿಷಯದ ಮೇಲೆ ಕನಿಷ್ಠ ಪಾಸಾಗುವಷ್ಟು ಸಿದ್ಧತೆ ಮಾಡುವುದಕ್ಕೆ ಬೇಕಾದ ತಯಾರಿ ಶಾಲಾ ಅವಧಿಯ ನಂತರ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾಡಿಸಲಾಗುತ್ತದೆ.ಡಿಡಿಪಿಐ ವಿಶೇಷ ನಿಗಾ:
ಈ ರೀತಿಯ ವಿಶೇಷ ತರಗತಿ ಮತ್ತು ವಿದ್ಯಾರ್ಥಿಗಳನ್ನು ಸಿದ್ಧ ಮಾಡುವ ಕುರಿತು ಡಿಡಿಪಿಐ ಶ್ರೀಶೈಲ ಬಿರಾದರ ಅವರೇ ನಿಗಾ ಇಟ್ಟಿದ್ದಾರೆ. ತಮ್ಮ ಶಾಲೆಯಲ್ಲಿ ನಡೆಸುವ ವಿಶೇಷ ತರಗತಿ ಮತ್ತು ಪ್ರಶ್ನೋತ್ತರ ನಡೆಸಿದ ಕುರಿತು ನಿತ್ಯವೂ ವಾಟ್ಸ್ ಅಪ್ ಗ್ರುಪ್ ಗೆ ಅಫ್ಲೋಡ್ ಮಾಡಬೇಕು. ಇದನ್ನು ಖುದ್ದು ಡಿಡಿಪಿಐ ಅವರೇ ಗಮನಿಸುತ್ತಾರೆ. ಪ್ರತಿ ನಿತ್ಯವೂ ಇದರ ಮೇಲೆ ಮೇಲುಸ್ತುವಾರಿಯನ್ನು ಆಯಾ ಶಾಲೆಯ ಮುಖ್ಯೋಪಾಧ್ಯಯರು ನೋಡಿಕೊಳ್ಳಬೇಕು. ಬಿಆರ್ ಸಿ ಗಳು ಸಹ ಇದರ ಮೇಲೆ ನಿಗಾ ಇಡಬೇಕು.ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಹಲವಾರು ಯೋಜನೆ ರೂಪಿಸಲಾಗಿದೆ. ಮಕ್ಕಳಲ್ಲಿ ಕಲಿಕೆ ಸಾಮರ್ಥ್ಯ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬಗೆಯ ಪ್ರಶ್ನೋತ್ತರ ಮಾಲಿಕೆ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಡಿಡಿಪಿಐ ಶ್ರೀಶೈಲ ಬಿರಾದರ ತಿಳಿಸಿದ್ದಾರೆ.