ಕನ್ನಡಪ್ರಭ ವಾರ್ತೆ ಮೈಸೂರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂ. 10ಕ್ಕೆ ಸತತವಾಗಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ಐತಿಹಾಸಿಕ ಹಾಗೂ ವಿಶಿಷ್ಟ ಗೌರವಕ್ಕೆ ಪಾತ್ರರಾಗಿರುವ ಹಿನ್ನೆಲೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ವಿಜಯನಗರದ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇವರಿಗೆ ವಿಶೇಷ ಅರ್ಚನೆ ಸಲ್ಲಿಸಿ, ಅವರ ದೀರ್ಘಾಯುಷ್ಯ, ಆರೋಗ್ಯ ಹಾಗೂ ದೇಶ ಸೇವೆಯ ನಿರಂತರ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು.

ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

ಮಂಡಲದ ಅಧ್ಯಕ್ಷ ಪೈ.ಟಿ. ರವಿ ಲಕ್ಷೀಪುರ ಮಾತನಾಡಿ, ದೇಶದ ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.


ಬಿಜೆಪಿ ಮುಖಂಡ ದಾರಿಪುರ ಡಿ. ಚಂದ್ರಶೇಖರ್ ಮಾತನಾಡಿ, ಭಾರತದ ರಾಜಕೀಯ ಇತಿಹಾಸದಲ್ಲಿ ನರೇಂದ್ರ ಮೋದಿ ಅವರ ಈ ಸಾಧನೆ ಅತ್ಯಂತ ಮಹತ್ವದ್ದಾಗಿದೆ. ಜವಾಹರಲಾಲ್ ನೆಹರು ಅವರು ಸಾರ್ವಜನಿಕ ಚುನಾವಣೆಯ ನಂತರ 4,398 ದಿನಗಳ ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ನರೇಂದ್ರ ಮೋದಿ ಅವರು 4,399 ದಿನಗಳ ಕಾಲ ಯಾವುದೇ ವಿರಾಮವಿಲ್ಲದೆ ಪ್ರಧಾನಮಂತ್ರಿಯಾಗಿ ನಿರಂತರ ಸೇವೆ ಸಲ್ಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ತಿಳಿಸಿದರು.

ಗೋಪಾಲ್ ರಾವ್, ಶ್ರೀನಿವಾಸ, ಪರಶುರಾಮಪ್ಪ, ಮರಿಸ್ವಾಮಿನಾಯಕ, ಹಿನಕಲ್ ಗಣೇಶ್, ಸುನಿಲ್, ಕೂರ್ಗಳ್ಳಿ ರೇವಣ್ಣ, ಶರತ್, ಗೊರೂರು ಶಿವಕುಮಾರ್, ನಾಡನಹಳ್ಳಿ ಸುರೇಶ್ ನಂದೀಶ್, ಈರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಚಿಕ್ಕಾನ್ಯ, ಹೇಮಂತ್, ಅಪ್ಪಾಜಿಗೌಡ, ಚೇತನ್, ಶಾಲಿನಿಕುಮಾರ್, ರಾಧ ಪಾಲೇಂದ್ರ, ನೇಹ, ಶಾಲಿನಿ, ನಾರಾಯಣ, ನಟರಾಜ, ಮಹದೇವಸ್ವಾಮಿ, ಕುಮಾರ್, ಬಸವರಾಜು, ರಾಘವೇಂದ್ರ, ಪ್ರಕಾಶ್, ಪ್ರಭು, ಮೋಹನ್, ಸಂಪ್ರೀತ್, ಪ್ರದೀಪ, ನಟರಾಜ್, ಪ್ರಸಾದ್, ಪ್ರಕಾಶ್, ಶಾಲಿನಿ, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.