ಕಣ್ಮನ ಸೆಳೆದ ಎಮ್ಮೆಗಳ ಓಟ

| Published : Nov 04 2024, 12:35 AM IST

ಸಾರಾಂಶ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಎಮ್ಮೆಗಳ ಓಟದ ಸ್ಪರ್ಧೆ ಬೆಳಗಾವಿಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಎಮ್ಮೆಗಳ ಓಟದ ಸ್ಪರ್ಧೆ ಬೆಳಗಾವಿಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಕೃಷಿಕರು ಸಗಣಿಯಿಂದ ತಯಾರಿಸಿದ ಪಾಂಡವರನ್ನು ಮನೆಯ ದನದ ಕೊಟ್ಟಿಗೆಯಿಂದ ಮುಂಬಾಗಿಲ ಮೂಲಕ ಮನೆಯಂಗಳದವರೆಗೆ ಅಲಂಕಾರವಾಗಿಟ್ಟು ಪೂಜಿಸುತ್ತಾರೆ. ಬೆಳಗಾವಿಯಲ್ಲಿ ಗವಳಿ ಜನರು ತಮ್ಮ ಮನೆಯಲ್ಲಿ ಎಮ್ಮೆ, ಕೋಣಗಳನ್ನು ಬಣ್ಣ ಬಣ್ಣವಾಗಿ ಶೃಂಗರಿಸಿ, ಅವುಗಳಿಗೆ ಪೂಜೆ ಸಲ್ಲಿಸಿ ಓಟದ ಸ್ಪರ್ಧೆ ಏರ್ಪಡಿಸಿ ಸಂಭ್ರಮಪಡುತ್ತಾರೆ. ಈ ಸಂಭ್ರಮ ಬರೀ ಗೌಳಿಗ ಜನರಿಗೆ ಸೀಮಿತವಾಗದೇ ನಗರದ ಎಲ್ಲರೂ ಭಾಗಿಯಾಗುತ್ತಾರೆ.ಗೋವುಗಳನ್ನು ಪೂಜ್ಯನೀಯವಾಗಿ ಕಾಣುವುದು ಸಾಮಾನ್ಯ. ಆದರೆ, ಗೌಳಿ ಸಮಾಜದವರು ಎಮ್ಮೆ-ಕೋಣಗಳನ್ನೂ ಪೂಜ್ಯನೀಯವಾಗಿ ಕಾಣುವುದು ವಿಶೇಷ. ಹಾಲು ಮಾರುವುದೇ ಪ್ರಮುಖ ವೃತ್ತಿಯಾದ ಗೌಳಿಗ ಸಮುದಾಯದವರು ನಗರದ ವಿವಿಧ ಭಾಗಗಳಲ್ಲಿ ಎಮ್ಮೆ, ಕೋಣಗಳನ್ನು ನವಿಲು ಗರಿ, ಬಣ್ಣದ ಹಾರಗಳಿಂದ ಅಲಂಕರಿಸುತ್ತಾರೆ. ಜಾನುವಾರುಗಳ ಮೈ ತೊಳೆದು, ಹಲಗೆ, ವಾದ್ಯಮೇಳಗಳೊಂದಿಗೆ ರಸ್ತೆಗಳಲ್ಲಿ ಎಮ್ಮೆಗಳ ಓಟದ ಸ್ಪರ್ಧೆ ನಡೆಸುತ್ತಾರೆ.

ಪಾಡ್ಯದ ದಿನ ಎಮ್ಮೆ ಓಟದ ಸ್ಪರ್ಧೆ: ಜಾನುವಾರುಗಳಿಗೂ ಆರತಿ ಬೆಳಗಿ ನಮಸ್ಕರಿಸುತ್ತಾರೆ. ಹೀಗಾಗಿ ದೀಪಾವಳಿ ಗೌಳಿಗರ ಪಾಲಿಗೆ ಸಮೃದ್ಧಿ ಹಬ್ಬವಾಗಿದೆ. ದೀಪಾವಳಿಯ ಪಾಡ್ಯದ ದಿನ ಮಧ್ಯಾಹ್ನದಿಂದಲೇ ಎಮ್ಮೆಗಳ ಓಟದ ಸ್ಪರ್ಧೆ ಆರಂಭವಾಗುತ್ತದೆ. ರಾತ್ರಿ ಈ ಓಟ ರಂಗೇರುತ್ತದೆ. ಗೌಳಿಗರೇ ಹೆಚ್ಚಾಗಿರುವ ಗೌಳಿ ಗಲ್ಲಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಎಮ್ಮೆಗಳ ಓಟದ ಸ್ಪರ್ಧೆ ಜನಮನ ಸೆಳೆಯುತ್ತದೆ. ರೋಮಾಂಚನಗೊಳಿಸುತ್ತದೆ.ಎಮ್ಮೆಗಳ ಮೆರವಣಿಗೆ:

ಇತ್ತೀಚಿಗೆ ಕುದರೆ ಓಟ, ಎತ್ತಿನ ಓಟದ ಸ್ಪರ್ಧೆಗಳು ಸಾಮಾನ್ಯ. ಆದರೆ, ನಗರ ಜೀವನದ ಮಧ್ಯೆಯೇ ಗೌಳಿಗರಿಂದ ಅಪರೂಪವೆನಿಸಿದ ಎಮ್ಮೆಗಳ ಓಟವನ್ನು ಇಂದಿನ ಆಧುನಿಕ ಯುಗದಲ್ಲಿಯೂ ಸಂಪ್ರದಾಯದಂತೆ ನಡೆಸಲಾಗುತ್ತಿದೆ. ಈ ಎಮ್ಮೆಗಳ ಓಟ ರೋಮಾಂಚನಕಾರಿಯಾಗಿರುತ್ತದೆ. ಈ ಬಾರಿ ದೀಪಾವಳಿಯ ಬಲಿ ಪಾಡ್ಯಮಿ ದಿನವಾದ ಶನಿವಾರ ನಗರದ ಬೀದಿ ಬೀದಿಗಳಲ್ಲಿ ಗೌಳಿಗರಿಂದ ಎಮ್ಮೆಗಳ ಆಕರ್ಷಕ ಮೆರವಣಿಗೆ ಮಾಡಲಾಯಿತು. ಎಮ್ಮೆಗಳ ಓಟ ನೋಡುವುದೇ ಕಣ್ಣಿಗೆ ಹಬ್ಬ. ಗೌಳಿ ಸಮುದಾಯ ಅಧಿಕವಾಗಿರುವ ಗೌಳಿ ಗಲ್ಲಿ, ಕೋನ್ವಾಳ ಗಲ್ಲಿ, ಚೌಹಾಟ್ ಗಲ್ಲಿಯಲ್ಲಿ ಈ ಆಚರಣೆ ದೀಪಾವಳಿಯ ಪ್ರಮುಖ ಆಕರ್ಷಣೆಯಾಗಿತ್ತು. ಎಮ್ಮೆಗಳು ಓಡುತ್ತಾ ಮುಂದೆ ಸಾಗುತ್ತಿದ್ದರೆ ಯುವಕರ ದಂಡು ಅವುಗಳನ್ನು ಹಿಂಬಾಲಿಸುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ಎಮ್ಮೆಗಳ ಓಟ ವೀಕ್ಷಿಸಿ ಸಂಭ್ರಮಿಸಿದರು.ಬೆಳಗಾವಿ ಚವಾಟ ಗಲ್ಲಿ, ಕ್ಯಾಂಪ್‌ ಪ್ರದೇಶ, ಟಿಳಕವಾಡಿಯ ಗೌಳಿ ಗಲ್ಲಿ, ಗೊಂಧಳಿ ಗಲ್ಲಿ, ಗಾಂಧಿ ನಗರ, ವಡಗಾವಿ, ಕೋನವಾಳ ಗಲ್ಲಿ, ಶುಕ್ರವಾರ ಪೇಟೆ ಸೇರಿದಂತೆ ವಿವಿಧೆಡೆ ಎಮ್ಮೆಗಳ ಓಟ ಆಯೋಜಿಸಲಾಗಿತ್ತು. ಎಮ್ಮೆಗಳಿಗೆ ಕವಡೆ ಸರ, ಕೋಡುಗಳಿಗೆ ಬಣ್ಣ ಬಳಿದು, ನವಿಲು ಗರಿಯಿಂದ ಶೃಂಗರಿಸಿದ್ದ ಎಮ್ಮೆಗಳು ಎಲ್ಲರ ಗಮನ ಸೆಳೆದವು.ಬೈಕಿನ ಸೈಲೆನ್ಸರ್‌ ತೆಗೆದು ಕರ್ಕಶ ಶಬ್ದ ಮಾಡುತ್ತ ಯುವಕರು ವೇಗವಾಗಿ ಬೈಕ್‌ ಓಡಿಸಿದರೆ ಎಮ್ಮೆಗಳು ಅವರ ಹಿಂದೆ ಓಡಿ ಬರುತ್ತಿದ್ದ ದೃಶ್ಯ ನೋಡುಗರ ಮೈನವಿರೇಳಿಸುವಂತೆ ಮಾಡಿತು. ರಸ್ತೆ ಪಕ್ಕ ನಿಂತಿದ್ದ ಜನರು ಸಿಳ್ಳೆ, ಚಪ್ಪಾಳೆಗಳ ಮೂಲಕ ಎಮ್ಮೆಗಳನ್ನು ಹುರಿದುಂಬಿಸಿದರು. ಇನ್ನು ಕೆಲ ಯುವಕರು ಎಮ್ಮೆಯ ಮುಂದೆ ಕಪ್ಪು ಬಟ್ಟೆ ಹಿಡಿದುಕೊಂಡು ಓಡುತ್ತಿದ್ದರೆ, ಎಮ್ಮೆಗಳು ಮತ್ತಷ್ಟು ಕೋಪಗೊಂಡು ಓಡುತ್ತಿದ್ದವು. ಎಮ್ಮೆಗಳ ರೋಷಾವೇಷದ ಈ ದೃಶ್ಯಗಳನ್ನು ಜನರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.