ಸಾರಾಂಶ
- ಚುಸಾಪ ನೇತೃತ್ವದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷ, ಕನ್ನಡಪರ ಹೋರಾಟಗಾರ ಕೆ.ಜಿ. ಶಿವಕುಮಾರ
- - - ಕನ್ನಡಪ್ರಭ ವಾರ್ತೆ ದಾವಣಗೆರೆಒಂದು ವಿಷಯ ಅತಿ ಬೇಗನೇ ಜನರ ಮನಸ್ಸನ್ನು ಮುಟ್ಟುವಂತೆ ಮಾಡುವ ವಿಶೇಷತೆ ಚುಟುಕು ಸಾಹಿತ್ಯದಾಗಿದೆ. ಇದು ಸಾಮಾನ್ಯ ವ್ಯಕ್ತಿಗೂ ಅರ್ಥವಾಗಬಲ್ಲದು. ಆ ಮೂಲಕ ಓದುಗನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅಂತಹ ಸಾಹಿತ್ಯದ ಸೇವೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಘಟಕ ಮಾಡುತ್ತಿದೆ ಎಂದು ಮಾಜಿ ನಗರಸಭಾ ಅಧ್ಯಕ್ಷ, ಕನ್ನಡಪರ ಹೋರಾಟಗಾರ ಕೆ.ಜಿ. ಶಿವಕುಮಾರ ಹೇಳಿದರು.
ನಗರದ ವಿನೋಬ ನಗರದ ಚು.ಸಾ.ಪ. ಕಚೇರಿ ಆವರಣದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ, ಪತ್ರಕರ್ತರು, ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಆಯೋಜಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕವಿಗೋಷ್ಠಿ ನಡೆಸುವುದರ ಜೊತೆಗೆ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತಹ ವಿಚಾರ ವಿನಿಮಯ, ಸಂವಾದ, ಚರ್ಚಾಗೋಷ್ಠಿ ಕಾರ್ಯಕ್ರಮಗಳನ್ನು ಆಯೋಜಿಸಿರಿ ಎಂದರು.ರಾಜ್ಯೋತ್ಸವ ಅಂಗವಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಆದರೆ ಇಂತಹ ಚುಟುಕು ಸಾಹಿತ್ಯದ ಕಾರ್ಯಕ್ರಮದಿಂದ ಹೊಸ ಹೊಸ ಚಿಗುರುಗಳು, ಯುವ ಪ್ರತಿಭೆಗಳು ಅನಾವರಣಗೊಳ್ಳಲು ಇದು ವೇದಿಕೆ ನೀಡಲಿದೆ. ನವೆಂಬರ್ ಕೊನೆ ದಿನಗಳಲ್ಲಿ ಪಾಲಿಕೆಯಿಂದ ರಾಜ್ಯೋತ್ಸವ ಆಚರಿಸಲಾಗುವುದು. ಚುಸಾಪ ಕೂಡ ವಿಶೇಷತೆಯ ಕಾರ್ಯಕ್ರಮ ಆಯೋಜಿಸಲಿ. ಪಾಲಿಕೆಯಿಂದ ನೀಡುವ ಗೌರವ ಸನ್ಮಾನಕ್ಕೆ ಇಬ್ಬರು ಹಿರಿಯ ಕವಿಗಳ ಹೆಸರುಗಳನ್ನು ನೀಡಿದರೆ ಮಹಾಪೌರರ ಸಭೆಯಲ್ಲಿ ಮಾತನಾಡಿ, ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ ಕಲ್ಪಿಸಲು ಮನವಿ ಮಾಡುವೆ ಎಂದರು.
ಹಿರಿಯ ಕವಯಿತ್ರಿ ಅನ್ನಪೂರ್ಣ ರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನಮ್ಮ ಮಾತೃಭಾಷೆ, ಕರುಳ ಭಾಷೆ. ಲಿಪಿಗಳಲ್ಲಿಯೇ ಸುಂದರವಾದ ಭಾಷೆ ಅಂದರೆ ಅದು ಕನ್ನಡಭಾಷೆ. ಕನ್ನಡ ಭಾಷೆ ಎನ್ನುವುದು ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಅಮ್ಮ ಎನ್ನುವುದು ನಮ್ಮ ಮೊದಲ ತೊದಲು ನುಡಿಯಾಗಿದೆ. ನಾವು ಏನು ಹೇಳುತ್ತೇವೆಯೋ ಅದನ್ನೇ ಬರೆಯುತ್ತೇವೆ. ಅದು ನಮ್ಮ ಕನ್ನಡ ಭಾಷೆಗೆ ಇರುವ ಗೌರವ ಎಂದರು.ಚುಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಾಹಿತಿ, ಕವಿಗಳಾದ ವೀರಭದ್ರಪ್ಪ ತೆಲಗಿ, ಶಿವಯೋಗಿ ಹಿರೇಮಠ, ಎಂ.ಬಸವರಾಜ, ಸತ್ಯಭಾಮ ಮಂಜುನಾಥ, ವೀಣಾ ಕೃಷ್ಣಮೂರ್ತಿ, ಮಲ್ಲಮ್ಮ ನಾಗರಾಜ, ಓಂಕಾರಯ್ಯ ತವನಿಧಿ, ಪಕ್ಕೀರೇಶ ಆದಾಪುರ, ಪತ್ರಕರ್ತ ಚನ್ನಬಸವ ಶೀಲವಂತ್, ಸುನೀತಾ ಪ್ರಕಾಶ, ಕೆ.ಪಿ.ತಾರೇಶ, ಅತೀಕ್, ವೀರೇಶ ಇತರರು ಭಾಗವಹಿಸಿದ್ದರು.
- - -ಬಾಕ್ಸ್ * ಹೋರಾಟಗಳು ಹರಿಯುವ ನೀರಿನಂತಿರಬೇಕು: ಕೆಜಿಎಸ್ ಗಡಿ ವಿಚಾರ, ಕಾವೇರಿ ವಿವಾದ, ಕನ್ನಡಿಗರಿಗೆ ಉದ್ಯೋಗ, ಕನ್ನಡ ನಾಮಫಲಕ ಕಡ್ಡಾಯ, ಗೋಕಾಕ ಚಳವಳಿ, ಯಾವುದೇ ಕನ್ನಡ ನಾಡು, ನುಡಿ, ಭಾಷೆ ಯಾವುದೇ ರೀತಿಯ ವಿಷಯ ಕುರಿತು ಹೋರಾಟಗಳು ಬಂದರೂ ಅವು ಮೊದಲು ಆರಂಭವಾಗುವುದು ನಮ್ಮ ದಾವಣಗೆರೆಯಿಂದಲೇ ಎಂದು ಕೆ.ಜಿ.ಶಿವಕುಮಾರ ಅಭಿಪ್ರಾಯಪಟ್ಟರು.
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಿಂದಲೇ ನೂರಾರು ಕನ್ನಡಪರ ಹೋರಾಟಗಳು ಆರಂಭವಾಗಿವೆ. ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗುವ ನಿಟ್ಟಿನಲ್ಲಿ ಸರ್ಕಾರ ಶೇ.60 ಕನ್ನಡಕ್ಕೆ ಆದ್ಯತೆ ನೀಡಿದೆ. ಆದರೆ, ಅದು ರಾಜ್ಯದಲ್ಲಿ 100ಕ್ಕೆ 100ರಷ್ಟು ಕಡ್ಡಾಯ ಆಗಬೇಕು. ನಮ್ಮ ಹೋರಾಟ ನಿರಂತರವಾಗಿ ಹರಿಯುವ ನೀರಿನಂತಾಗಬೇಕು ಎಂದರು.- - - -3ಕೆಡಿವಿಜಿ38ಃ:
ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಜಿ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಗಳ ಅರ್ಪಿಸಿ ಉದ್ಘಾಟಿಸಿದರು.