ಕಟ್ಟಡದ ತಳಪಾಯದಲ್ಲಿ ಕಲ್ಲಿನ ಗುಂಡು, ಪ್ರಾಚೀನ ಕಟ್ಟಡದ ಕುರುಹು ಪತ್ತೆ..!

| Published : Nov 19 2025, 12:30 AM IST

ಕಟ್ಟಡದ ತಳಪಾಯದಲ್ಲಿ ಕಲ್ಲಿನ ಗುಂಡು, ಪ್ರಾಚೀನ ಕಟ್ಟಡದ ಕುರುಹು ಪತ್ತೆ..!
Share this Article
  • FB
  • TW
  • Linkdin
  • Email

ಸಾರಾಂಶ

ಎಲ್‌ಐಸಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಗುಂಡಿ ತೆಗೆಯುವಾಗ ಎರಡು ದಿನಗಳಲ್ಲಿ ಸುಮಾರು 30 ರಿಂದ 40 ಕೆ.ಜಿ ತೂಕದ ಒಂದೇ ಅಳತೆಯ 10ಕ್ಕೂ ಹೆಚ್ಚು ಕಲ್ಲಿನ ಗುಂಡುಗಳು ಪತ್ತೆಯಾಗಿವೆ. ಅವುಗಳನ್ನು ಪಟ್ಟಣದ ಶ್ರೀ ಚಾಮರಾಜೇಂದ್ರ ಸ್ಮಾರಕ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗುವುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯ ಕೆನರಾ ಬ್ಯಾಂಕ್ ಶಾಖೆ ಪಕ್ಕದಲ್ಲಿ ನಿರ್ಮಿಸುತ್ತಿರುವ ಎಲ್‌ಐಸಿ ಶಾಖೆ ಕಚೇರಿ ಕಟ್ಟಡದ ತಳಪಾಯದಲ್ಲಿ ಹತ್ತಾರು ಕಲ್ಲಿನ ಗುಂಡುಗಳು ಪತ್ತೆಯಾಗಿ ಪ್ರಾಚೀನ ಕಟ್ಟಡದ ಕುರುಹುಗಳು ಕಂಡುಬಂದಿವೆ.

ಕಟ್ಟಡಕ್ಕೆ ಐದಾರು ಅಡಿ ದೂರದಲ್ಲಿ ನೆಲ ಮಟ್ಟದಿಂದ 5 ಅಡಿಗಳಷ್ಟು ಅಳದಲ್ಲಿ ಗುಂಡುಗಳು ಸಿಕ್ಕಿದ್ದು, ಸ್ಥಳದಲ್ಲಿ ಸುರಕಿ ಗಾರೆ ಮತ್ತು ಮಣ್ಣಿನ ಸುಟ್ಟ ಇಟ್ಟಿಗೆಗಳ ಗೋಡೆಯಂತಹ ರಚನೆ ಕಂಡು ಬಂದಿದೆ. ಒಂದೆಡೆ ಕಾಡುಗಲ್ಲಿನ ವರಸೆಯೂ ಗೋಚರಿಸಿದೆ. ಕಟ್ಟಡ ನಿರ್ಮಾಣಕ್ಕೆ 15ಕ್ಕೂ ಹೆಚ್ಚು ಗುಂಡಿಗಳನ್ನು ತೆಗೆದಿದ್ದು, ಈ ಪೈಕಿ ಮೂರು ಗುಂಡಿಗಳಲ್ಲಿ ಪ್ರಾಚೀನ ಕಟ್ಟಡದ ಕುರುಹುಗಳು ಕಂಡುಬಂದಿವೆ.

ಎಲ್‌ಐಸಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಗುಂಡಿ ತೆಗೆಯುವಾಗ ಎರಡು ದಿನಗಳಲ್ಲಿ ಸುಮಾರು 30 ರಿಂದ 40 ಕೆ.ಜಿ ತೂಕದ ಒಂದೇ ಅಳತೆಯ 10ಕ್ಕೂ ಹೆಚ್ಚು ಕಲ್ಲಿನ ಗುಂಡುಗಳು ಪತ್ತೆಯಾಗಿವೆ. ಅವುಗಳನ್ನು ಪಟ್ಟಣದ ಶ್ರೀ ಚಾಮರಾಜೇಂದ್ರ ಸ್ಮಾರಕ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗುವುದು. ಭೂಮಿ ಅಗೆಯುವ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡುವಂತೆ ಸ್ಥಳೀಯ ಸಿಬ್ಬಂದಿಗೆ ಸೂಚಿಸಲಾಗಿದೆ.

ಜೊತೆಗೆ ಪ್ರಾಚೀನ ಅವಶೇಷಗಳು ಮತ್ತೆ ಸಿಕ್ಕಿದರೆ ತಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು. ಐತಿಹಾಸಿಕ ಕುರುಹುಗಳನ್ನು ನಾಶ ಪಡಿಸಬಾರದು ಎಂದು ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸುನಿಲ್ ಎಲ್‌ಐಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಟ್ಟಣದ ಕೋಟೆ ಒಳಗಿನ ಮಿತಿಯಲ್ಲಿ ಯಾವುದೇ ಕಟ್ಟಡ, ಒಳ ಚರಂಡಿ, ನೆಲ ಅಗೆಯುವುದು ಸೇರಿದಂತೆ ಇತ್ಯಾದಿ ಕೆಲಸ ಆರಂಭ ಮಾಡುವ ಮೊದಲು ಇಲಾಖೆ ಅನುಮತಿ ಪಡೆಯಬೇಕು. ಹಾಗೆಯೇ, ಯಾವುದೇ ಭೂಮಿ ಅಗೆಯುವ ಕೆಲಸಗಳನ್ನು ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು ಎನ್ನುವ ನಿಯಮವಿದೆ. ಆದರೆ, ಈ ಎಲ್ಲಾ ನಿಯಮಗಳೆಲ್ಲ ಪಾಲಿಸದೆ ಯಾರ ಅನುಮತಿಯನ್ನು ಪಡೆದಿಲ್ಲ. ಕುರುಹುಗಳ ಪತ್ತೆ ಆಗುತ್ತಿರುವುದಲ್ಲದೇ, ಪಟ್ಟಣದ ಹಲವೆಡೆ ಐತಿಹಾಸಿಕ ಸ್ಮಾರಕಗಳು ಮುಂಚಿ ಹೋಗುವಂತೆ ಪ್ರಭಾವಿಗಳು ಮೂರ್‍ನಾಲ್ಕು ಹಂತಸ್ಥಿತಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದರೂ ಸಂಬಂಧ ಪುರಾತತ್ವ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣ ತಣ ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.