ಯಾದವ ಸಮಾಜದ ಮುಖಂಡರ ಮೇಲೆ ಮೀಸೆ ಮಹಾಲಿಂಗಪ್ಪ ವಾಗ್ದಾಳಿ । ಸುಳ್ಳು ಆರೋಪಗಳಿಗೆ ವಿಚಲಿತರಾಗೋಲ್ಲಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾ ಯಾದವ ಸಂಘದಲ್ಲಿ ಯಾವುದೇ ಬಗೆಯ ಅವ್ಯವಹಾರಗಳು ನಡೆದಿಲ್ಲ. ಸಂಘಕ್ಕೆ ಶೀಘ್ರ ಚುನಾವಣೆ ನಡೆಯುತ್ತಿರುವುದರಿಂದ ಸದಸ್ಯರ ದಿಕ್ಕು ತಪ್ಪಿಸುವ ಕಾರಣದಿಂದ ಸಲ್ಲದ ಆರೋಪಗಳ ಮಾಡಲಾಗುತ್ತಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ ದೂರಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಕಾರ ಸಂಘದ ಅಧಿಕಾರಿಗಳು ನೀಡಿರುವ ವಿಚಾರಣಾ ವರದಿಯಲ್ಲಿ ಯಾವುದೇ ಹುರುಳಿಲ್ಲ. ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತಮ್ಮಿಚ್ಚೆಯಂತೆ ಪಡೆಯಲಾಗಿದೆ. ಖರ್ಚು ವೆಚ್ಚಗಳಿಗೆ ಸಂಬಂಧಿಸಿದ ಎಲ್ಲ ವೋಚರ್‌ಗಳ ಆಡಳಿತಾಧಿಕಾರಿಗಳಿಗೆ ನೀಡಲಾಗಿದೆ. ಬೇಕಿದ್ದವರು ಅವರ ಬಳಿ ಹೋಗಿ ಪರಿಶೀಲಿಸಬಹುದು ಎಂದರು.

ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆದ ನಿರ್ಣಯದಂತೆ ಹಳೇ ವಿದ್ಯಾರ್ಥಿ ನಿಲಯ ಕಟ್ಟಡ ಕೆಡವಿ ಸಂಬಂಧ ಪಟ್ಟ ಇಂಜಿನಿಯರ್ ಅವರಿಂದ ಅಂದಾಜು ಪಟ್ಟಿ ತಯಾರಿಸಲಾಗಿದೆ. ನಂತರ ಸಚಿವರು, ಲೋಕಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರ ಗಮನಕ್ಕೆ ತಂದು ಅನುದಾನ ಮಂಜೂರು ಮಾಡಿಸಲಾಗಿದೆ.ಈ ಅನುದಾನ ಈಗಲೂ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ನಿರ್ಮಿತಿ ಕೇಂದ್ರದವರು ಕೆಲಸ ಆರಂಭಿಸಲು ಮುಂದಾದಾಗ ಕೆಲವರು ಹೋಗಿ ಅಡ್ಡಿ ಪಡಿಸಿದ್ದಾರೆ. ಕಾಮಗಾರಿಗೆ ತಡೆ ವೊಡ್ಡಿದರೆ ಕಟ್ಟಡ ನಿರ್ಮಾಣ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಯಾದವ ಸಂಘದ ಎಲ್ಲ ವ್ಯವಹಾರಗಳ ನಿಯಮಾನುಸಾರ ಮಾಡಲಾಗಿದೆ. ಅಧೀಕೃತ ಲೆಕ್ಕ ಪರಿಶೋಧಕರಿಂದ ಆಡಿಟ್ ಮಾಡಿಸಲಾಗಿದೆ. ನಮ್ಮ ಮೇಲೆ ಆರೋಪ ಮಾಡಿದವರಿಗೆ ಗೊಲ್ಲ ಜನಾಗಂದ ನಿಜವಾದ ಸಮಸ್ಯೆಗಳೇ ಗೊತ್ತಿಲ್ಲ. ಅವ್ಯವಹಾರ ಆರೋಪ ಮಾಡುವ ಬದಲು ನಿಖರವಾದ ದಾಖಲೆಗಳು ಇದ್ದಲ್ಲಿ ಕೇಸು ದಾಖಲಿಸಿ ನ್ಯಾಯ ಪಡೆಯಬಹುದಾಗಿದೆ ಎಂದು ಮೀಸೆ ಮಹಲಿಂಗಪ್ಪ ತಿಳಿಸಿದರು.


ಸಂಘಕ್ಕೆ ಆಡಳಿತಾಧಿಕಾರಿಗಳು ನೇಮಕವಾದಾಗಿನಿಂದ ಯಾವುದೇ ಅನುದಾನಗಳು ಬಂದಿಲ್ಲ.ಸಂಘಕ್ಕೆ ಖರೀದಿಸಿದ ನಿವೇಶನದ ಬಾಬ್ತು53 ಲಕ್ಷ ರೂಪಾಯಿ ಪಾವತಿಸಿದ್ದು ಹಣವಿಲ್ಲದ ಕಾರಣ ನೋಂದಣಿ ಮಾಡಿಸಿಲ್ಲ. ಆಡಳಿತಾಧಿಕಾರಿಗಳ ನೇಮಕವಾದ ನಂತರ ಸಂಘದಲ್ಲಿ ಹಣವಿದ್ದು ಸಿಎ ನಿವೇಶನ ನೋಂದಣಿ ಮಾಡಿಕೊಳ್ಳಿ ಎಂದು ಆರೋಪ ಮಾಡಿದವರು ಹೇ್ಳಬಹುದಿತ್ತೆಂದು ಮೀಸೆ ಮಹಲಿಂಗಪ್ಪ ವ್ಯಂಗ್ಯವಾಡಿದರು.

ಮಾಜಿ ಶಾಸಕ ಎ.ವಿ.ಉಮಾಪತಿಯವರು ಹೊಳಲ್ಕೆರೆ ಯಾದವ ಸಂಘದ ಉಸ್ತುವಾರಿ ಹೊತ್ತಿದ್ದು ಅಲ್ಲಿನ ಕಟ್ಟಡ, ಸಂಪನ್ಮೂಲ ಹಾಗೂ ಖರ್ಚು ವೆಚ್ಚದ ಬಗ್ಗೆ ಇದುವರೆಗೆ ಯಾವುದೇ ಲೆಕ್ಕ ಪತ್ರ ಕೊಟ್ಟಿಲ್ಲ. ತಾವೇ ಲೆಕ್ಕ ಪತ್ರ ಕೊಡದವರು ಇನ್ನೊಬ್ಬರ ಪ್ರಶ್ನಿಸುವ ನೈತಿಕತೆ ಹೇಗೆ ಬರುತ್ತದೆ ಎಂದು ಮೀಸೆ ಮಹಲಿಂಗಪ್ಪ ಹೇಳಿದರು. ಆನಂದ್, ಪ್ರಕಾಶ್, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.