ಸಾರಾಂಶ
ನಾಲ್ಕನೇ ವರ್ಷದ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನೆರವೇರಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಕ್ಲಬ್ ನ ವತಿಯಿಂದ ಆಯೋಜಿಸಿದ ನಾಲ್ಕನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಶನಿವಾರ ಹಾಗೂ ಭಾನುವಾರ ಅತ್ಯಂತ ಯಶಸ್ವಿಯಾಗಿ ನೆರವೇರಿತು.ಕ್ರಿಕೆಟ್, ಹಗ್ಗಜಗ್ಗಾಟ, ಸಾಂಪ್ರದಾಯಿಕ ಕ್ರೀಡೆಗಳಾದ ಗೂಟ ಓಟ, ದಂಪತಿಗಳಿಗೆ ಹಾಳೆಎಳೆಯುವುದು, ವಯೋಮಿತಿಗೆ ತಕ್ಕಂತೆ ಓಟದ ಸ್ಪರ್ಧೆ, ಮುಂತಾದ ಮನರಂಜನಾ ಕ್ರೀಡೆಗಳು ತಳೂರು ಎಂ ಚಂಗಪ್ಪ ಹಾಗೂ ಕುಶಾಲಪ್ಪನವರ ಗದ್ದೆಯಲ್ಲಿ ಕ್ರೀಡಾ ಪ್ರೇಮಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಕ್ರೀಡಾಕೂಟದಲ್ಲಿ ಅಂತಿಮವಾಗಿ ಕ್ರಿಕೆಟ್ ನಲ್ಲಿ ಟೀಮ್ ಭಗವತಿ ಪ್ರಥಮ ಸ್ಥಾನ ಹಾಗೂ ಎಂಸಿಬಿ ಗೋಳಿಕಟ್ಟೆ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡವು. ಹಗ್ಗಜಗ್ಗಾಟ ಪುರುಷರ ಪಂದ್ಯಾವಳಿಯಲ್ಲಿ ಶ್ರೀ ರಾಮಭಕ್ತಾಂಜನೇಯ ‘ಎ ತಂಡವು ಮೊದಲನೇ ಸ್ಥಾನ ಪಡೆದುಕೊಂಡರೆ ಶ್ರೀ ರಾಮಭಕ್ತಾಂಜನೇಯ ‘ಬಿ’ ತಂಡವು ಎರಡನೇ ಸ್ಥಾನ ಪಡೆದುಕೊಂಡರು. ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ನಾಗಶ್ರೀ ಸುಳ್ಯ ತಂಡವು ಮೊದಲನೇ ಸ್ಥಾನ ಪಡೆದುಕೊಂಡರೆ, ಮಹಾದೇವ ಸ್ಪೋರ್ಟ್ ಕ್ಲಬ್ ಬಲಮುರಿ ಎರಡನೇ ಸ್ಥಾನ ಪಡೆದುಕೊಂಡರು. 20 ತಂಡಗಳನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟ ಹಾಗೂ ಹಗ್ಗ ಜಗ್ಗಾಟ 7 ಸ್ಪರ್ಧಿಗಳನ್ನೊಳಗೊಂಡ ಪುರುಷರು, 7 ಮಹಿಳೆಯರು ಹಾಗೂ ಮುಕ್ತ ಓಟಗಾರರ ಪಂದ್ಯಾಟಗಳಿಂದ ನೆರೆದಿರುವ ಕ್ರೀಡಾ ಅಭಿಮಾನಿಗಳನ್ನು ಗಮನ ಸೆಳೆದರು.ಬೇಕೋಟ್ ಮಕ್ಕ ಕ್ಲಬ್ ನ ಅಧ್ಯಕ್ಷರಾದಂತಹ ತಳೂರು ಎಸ್. ವಿವೇಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಸಭಾಧ್ಯಕ್ಷರು ಹಾಗೂ ಮಾಜಿ ಶಾಸಕರಾದಂತಹ ಕೆ ಜಿ ಬೋಪಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರು ತಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಟ್ಟಗೇರಿ ವಿ ಎಸ್ ಎಸ್ ಎನ್ ಅಧ್ಯಕ್ಷರು ಹಾಗೂ ಸೆನೆಟ್ ಸದಸ್ಯರಾದಂತಹ ತಳೂರು ಎ ಕಿಶೋರ್ ಕುಮಾರ್, ಹಿರಿಯರಾದಂತಹ ಪೊನ್ನಟ್ಟಿ ಅಕ್ಕಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದಂತಹ ತಳೂರು ದಿನೇಶ್ ಕರುಂಬಯ್ಯ, ಕೃಷಿ ಉತ್ಪನ್ನ ಹಾಗೂ ಮಾರುಕಟ್ಟೆಯ ಮಾಜಿ ಅಧ್ಯಕ್ಷರಾದಂತಹ ಬೆಪ್ಪುರನ ಎಂ ಮೇದಪ್ಪ, ಕ್ರೀಡೋತ್ಸವದ ಸ್ಥಳದಾನಿಗಳದಂತಹ ತಳೂರು ಎಂ ಚಂಗಪ್ಪ ಹಾಗೂ ತಳೂರು ಎಂ ಕುಶಾಲಪ್ಪ, ಕ್ರಿಕೆಟ್ ಹಾಗೂ ಹಗ್ಗಜಗಾಟ ಪಂದ್ಯಾವಳಿಗಳ ಪ್ರಥಮ ಬಹುಮಾನದ ಟ್ರೋಫಿ ದಾನಿಗಳಾದಂತಹ ತಳೂರು ತಂಬಿ ಪೂಣಚ್ಚ, ಕಡ್ಲೆರ ಎಂ ಗಣೇಶ್, ತಳೂರು ದಿನೇಶ್ ಕರುಂಬಯ್ಯ ಹಾಗೂ ಗ್ರಾಮದ ಮತ್ತಿತರ ಹಿರಿಯರು, ಕ್ರೀಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.