ರಾಜಕಾರಣದಲ್ಲಿ 45 ವರ್ಷ ಬದುಕುವುದು ಎಂದರೇ ಅತ್ಯಂತ ಕಷ್ಟದ ಕೆಲಸವಾಗಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ರಾಜಕಾರಣದಲ್ಲಿ 45 ವರ್ಷ ಬದುಕುವುದು ಎಂದರೇ ಅತ್ಯಂತ ಕಷ್ಟದ ಕೆಲಸವಾಗಿದೆ. ನನ್ನ ಬಳಿ ಯಾವುದೇ ಕೆಲಸ, ಸಹಾಯ ಕೋರಿ ಬಂದವರಿಗೆ ನಾನು ಬರಿಗೈಯಲ್ಲಿ ಕಳಿಸಲಿಲ್ಲ, ಸ್ಪಂದಿಸುವುದನ್ನು ಬಿಡಲಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಸೋಮವಾರ ನಗರಕ್ಕೆ ಆಗಮಿಸಿದ ಅವರನ್ನು ಇಲ್ಲಿಯ ಕ್ರೀಡಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಸಂಘ, ಕ್ರೀಡಾಪಟುಗಳು, ತಾಲೂಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು,
ನನ್ನ ಶಿಕ್ಷಕ ವೃಂದದ ನೋವಿಗೆ ಧ್ವನಿಯಾಗುವುದನ್ನು ನಾನು ನಿಲ್ಲಿಸಲಿಲ್ಲ. ಶಿಕ್ಷಕರ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಭಾವನಾತ್ಮಕವಾಗಿ ನುಡಿದ ಅವರು, ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ದ್ರೋಹ ಬಗೆಯುವುದಿಲ್ಲ, ಶಿಕ್ಷಕರಿಗೆ ಕಳಂಕ ಬರದಂತೆ, ದ್ರೋಹ ಎಸಗದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.ನಾನು ನನ್ನ ಶಾಸಕತ್ವದ ನಿಧಿಯಲ್ಲಿ ಬಹುಪಾಲು ಅನುದಾನವನ್ನು ಉತ್ತರ ಕನ್ನಡ ಜಿಲ್ಲೆಗೆ ಮಂಜೂರು ಮಾಡಿದ್ದೇನೆ. ಜಿಲ್ಲೆಯಲ್ಲಿ ನೀಡಿದ ಅನುದಾನದ ಸದ್ಬಳಕೆಯಾಗಿರುವ ಸಂತೃಪ್ತಿ ನನಗೆ ಇದೆ ಎಂದರು.
ಸಾಮಾನ್ಯ ಶಿಕ್ಷಕನಾದ ನನ್ನನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿ ಕಳೆದ 45 ವರ್ಷಗಳಿಂದ ಅದೇ ಪ್ರೀತಿ, ಅದೇ ವಿಶ್ವಾಸವನ್ನು ತೋರುತ್ತಿರುವ ಬಂದ ಅಭಿಮಾನಿಗಳು, ಶಿಕ್ಷಕ ವೃಂದ ಹಾಗೂ ಹಿತೈಷಿಗಳ ಋಣವನ್ನು ಹೇಗೆ ತೀರಿಸುವುದು ಎಂಬುವುದೇ ನನಗೆ ದೊಡ್ಡ ಚಿಂತೆಯಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಸುನೀಲ ಹೆಗಡೆ, ಕ್ರೀಡಾಭವನದ ಅಧ್ಯಕ್ಷ ಶ್ರೀಪತಿ ಭಟ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಹಾಗೂ ವಿವಿಧ ಸಂಘಟನೆಗಳು ಸಭಾಪತಿಯವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಕುರುಬೂರ ಸಮಾಜದ ಜಿಲ್ಲಾಧ್ಯಕ್ಷ ಎಮ್.ಎಚ್. ಹುರಕಡ್ಲಿ, ಜಿ.ಆರ್. ಭಟ್ ಹಾಗೂ ಕ್ರೀಡಾಭವನದ ಕಾರ್ಯದರ್ಶಿ ಹಾಗೂ ತರಬೇತುದಾರ ಉದಯ ಜಾಧವ, ಅನಿಲ ಲಾಡ್, ರಾಮನಾರಾಯಣ ಐತಾಳ, ಪ್ರಶಾಂತ ನಾಯ್ಕ, ಪ್ರಶಾಂತ ಮಹಾಲಿಂಗಪುರ, ದುರ್ಗಾಪ್ರಸಾದ ಡಾಂಗೆ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಬಿಇಒ ಪ್ರಮೋದ ಮಹಾಲೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಬಾವಿಕೇರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಝಾಕೀರ ಜಂಗೂಬಾಯಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಇದ್ದರು.