ಒಂಟೆ, ಗೋವುಗಳ ವಧೆ ತಡೆಗಟ್ಟಲು ಜಿಲ್ಲೆಯಾದ್ಯಂತ 11 ಪಶು ವೈದ್ಯರ ತಂಡ

| Published : Jun 14 2024, 01:09 AM IST

ಒಂಟೆ, ಗೋವುಗಳ ವಧೆ ತಡೆಗಟ್ಟಲು ಜಿಲ್ಲೆಯಾದ್ಯಂತ 11 ಪಶು ವೈದ್ಯರ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಜೊತೆಗೆ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲೆಯಾದ್ಯಂತ ಜೂ.17ರಂದು ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಜೊತೆಗೆ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಗುರುವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಜರುಗಿದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬ ಶಾಂತಿಯುತವಾಗಿ ಜರುಗಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿವ ನೀರು ಪೂರೈಕೆ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದ ಅವರು ಸಾರ್ವಜನಿಕರು ಸಹ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕಲಬುರಗಿ ಮಹಾನಗರ ಮತ್ತು ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲಿ ಪ್ರತ್ಯೇಕ ಸ್ಥಳದಲ್ಲಿ ತ್ಯಾಜ್ಯ ಮಾಂಸ ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿದ್ದು, ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆ ಸ್ವಚ್ಛತಾ ಸಿಬ್ಬಂದಿಗಳಿಗೆ ಮಾಂಸ ಅಂಗಡಿ ಮಾಲೀಕರು ತ್ಯಾಜ್ಯ ನೀಡಿ ಸಹಕರಿಸಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕಬಾರದು. ಮಾಂಸ ಮಾರಾಟ ಅಂಗಡಿಗಳು ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.

ಚೆಕ್ ಪೋಸ್ಟ್‍ಗಳಲ್ಲಿ ಅಕ್ರಮ ಗೋವು/ ಒಂಟೆ ಸಾಗಾಣಿಕೆ ಮತ್ತು ವಧೆ ತಡೆಗಟ್ಟುವ ನಿಟ್ಟಿನಲ್ಲಿ 90 ಜನ ಒಳಗೊಂಡ ತಾಲೂಕುವಾರು 11 ಪಶು ವೈದ್ಯರ ತಂಡ ರಚಿಸಿದ್ದು, ಈ ತಂಡ ದಿನದ 24 ಗಂಟೆ ಕಾಲ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ. ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಗೋವು, ಪ್ರಾಣಿಗಳನ್ನು ಸಾಗಿಸುವಂತಿಲ್ಲ ಎಂದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ರ ಪ್ರಕಾರ ಯಾವುದೇ ರೀತಿಯ ಗೋವು, ಕರು, ಆಕಳು, ಹೋರಿ ಹಾಗೂ ಒಂಟೆ ವಧೆ ಮಾಡುವಂತಿಲ್ಲ. 13 ವರ್ಷ ಮೇಲ್ಪಟ್ಟ ಎಮ್ಮೆ, ಕೋಣ ವಧೆ ಮಾಡಬಹುದಾಗಿದೆ. ಹಬ್ಬದ ಈ ಸಂದರ್ಭದಲ್ಲಿ ಹಗಲು ವೇಳೆಯಲ್ಲಿ ಪಶು ವೈದ್ಯಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡೆ ಪ್ರಾಣಿಗಳನ್ನು ವಾಹನಗಳ ಮೂಲಕ ಸಾಗಿಸಬಹುದಾಗಿದೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಪ್ರಾಣಿಗಳ ಸಾಗಾಟ ನಿಷೇಧಿಸಲಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ, ಕಲಬುರಗಿ ನಗರ ವ್ಯಾಪ್ತಿಯಲ್ಲಿ ಹಬ್ಬದ ದಿನದಂದು ಮನೆಯಿಂದಲೆ ಮಾಂಸ ತ್ಯಾಜ್ಯ ಸಂಗ್ರಹಣೆಗೆ ಹೆಚ್ಚಿನ ಸ್ವಚ್ಛತಾ ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಹಾಗರಗಾ ಕ್ರಾಸ್ ಬಳಿ ಸ್ಥಳ ಗುರುತಿಸಿದೆ. ನಗರ ವ್ಯಾಪ್ತಿಯಲ್ಲಿ ಓ.ಎಚ್.ಟಿ ಟ್ಯಾಂಕ್ ಸ್ವಚ್ಛತಾ ಕಾರ್ಯ ನಡೆದಿದ್ದು, ಸ್ವಚ್ಛ ಕುಡಿಯುವ ನೀರು ಪೂರೈಕೆ ನಮ್ಮ ಆದ್ಯತೆ ಆಗಿದೆ ಎಂದರು.

ಜಿಲ್ಲಾ ಪಂಚಾಯ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚರಂಡಿ, ಕುಡಿಯುವ ನೀರು ಪೂರೈಕೆ ಟ್ಯಾಂಕರ್ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಇಲ್ಲಿಯೂ ವೈಜ್ಞಾನಿಕವಾಗಿ ಮಾಂಸ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈ ಸಂಬಂಧ ನಾಳೆ ಗ್ರಾಮ ಪಂಚಾಯತಿ ಸ್ವಚ್ಛತಾ ಸಿಬ್ಬಂದಿಗಳಿಗೆ ಅರಿವು ಮೂಡಿಸಲಾಗುತ್ತದೆ ಎಂದರು.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ: ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ ಮತ್ತು ಎಸ್.ಪಿ. ಅಕ್ಷಯ್ ಹಾಕೈ ಅವರು ಮಾತನಾಡಿ, ಕೆಲವು ಸಮಾಜ ವಿರೋಧಿ ಗುಂಪುಗಳು ಅನಗತ್ಯ ಹಬ್ಬದ ಸಂದರ್ಭದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡುವುದುಂಟು. ಇಂತಹ ಪೋಸ್ಟ್ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಅದರ ಸತ್ಯಾಸತ್ಯತೆ ತಿಳಿಯದೆ ಅನಗತ್ಯ ಫಾರ್ವಾಡ್ ಮಾಡಬಾರದು. ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇನ್ನು ಶಾಂತಿಯುತ ಹಬ್ಬ ಆಚರಣೆಗೆ ಅಗತ್ಯ ಭದ್ರತೆ ವ್ಯವಸ್ಥೆ ಪೊಲೀಸ್ ಇಲಾಖೆಯಿಂದ ನೀಡಲಾಗುತ್ತದೆ ಎಂದ ಅವರು, ಸಂಚಾರಿ ನಿಯಮ ಪಾಲಿಸಲು ಸಾರ್ವಜನಿಕರು ಮರೆಯಬಾರದು ಎಂದರು.

11 ಪಶು ವೈದ್ಯರ ತಂಡ ರಚನೆ: ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ಮಾತನಾಡಿ, ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮ ಕುರಿತು ವಿವರಿಸುತ್ತಾ, ಅಕ್ರಮವಾಗಿ ಒಂಟೆ ಮತ್ತು ಗೋವುಗಳ ಸಾಗಾಣಿಕೆ ಮತ್ತು ವಧೆ ತಡೆಗಟ್ಟಲು ಜಿಲ್ಲೆಯಾದ್ಯಂತ ತಾಲೂಕುವಾರು 11 ಪಶು ವೈದ್ಯರ ತಂಡ ರಚಿಸಿದ್ದು, 90 ಪಶು ವೈದ್ಯಾಧಿಕಾರಿಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದಾರೆ.

ಸಾರ್ವಜನಿಕರು ಏನೇ ಸಮಸ್ಯೆಗಳಿದ್ದಲ್ಲಿ ತಾಲೂಕುವಾರು ಅಫಜಲಪೂರ ಡಾ.ಕುಮ್ಮಪ್ಪ ಕೋಟೆ-9449123571, ಆಳಂದ ಡಾ.ಯಲ್ಲಪ್ಪ ಇಂಗಳೆ-9972292832, ಚಿಂಚೋಳಿ ಡಾ.ಧನರಾಜ ಬೊಮ್ಮ-9880220932, ಚಿತ್ತಾಪೂರ ಡಾ.ಶಂಕರ ಕಣ್ಣಿ-9611732647, ಜೇವರ್ಗಿ ಡಾ.ಶೋಭಾ ಸಜ್ಜನ್-9686133232, ಕಲಬುರಗಿ ಡಾ.ಸುಭಾಷ್ಚಂದ್ರ ಟಕ್ಕಳಕಿ-9448636316, ಸೇಡಂ ಡಾ. ಮಾರುತಿ ಉಮ್ಲಾ ನಾಯಕ್-9449618723, ಕಮಲಾಪೂರ ಡಾ.ಅನುಜಕುಮಾರ-9019229949, ಕಾಳಗಿ ಡಾ.ಗೌತಮ ಕಾಂಬಳೆ-8762914677, ಯಡ್ರಾಮಿ ಡಾಪ್ರಭು ಕಲ್ಲೂರ-9880800097 ಹಾಗೂ ಶಹಾಬಾದ ಡಾ.ಯಲ್ಲಪ್ಪ ಇಂಗಳೆ-9972292832 ಇವರನ್ನು ಸಂಪರ್ಕಿಸಬಹುದಾಗಿದೆ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಮೀನಾಕ್ಷಿ ಆರ್ಯ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ಸೇರಿದಂತೆ ಪೊಲೀಸ್ ಮತ್ತು ಇತರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.