ಭೀಕರ ರಸ್ತೆ ಅಪಘಾತ; ಯುವಕ ಸಾವು

| Published : Sep 06 2024, 01:01 AM IST

ಸಾರಾಂಶ

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮುಕ್ಕ ಜಂಕ್ಷನ್‌ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಬಳಿ ಸ್ಕೂಟರ್ ನಿಧಾನಗೊಳಿಸಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಳೆಯಂಗಡಿಯ ಇಂದಿರಾನಗರ ನಿವಾಸಿ ಗಣೇಶ ದೇವಾಡಿಗ (27) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.ಮೃತ ಯುವಕ ಗಣೇಶ್‌ ದೇವಾಡಿಗ ಪಣಂಬೂರು ಬಂದರಿನಲ್ಲಿ ಉದ್ಯೋಗದಲ್ಲಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಲಸಕ್ಕೆಂದು ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮುಕ್ಕ ಜಂಕ್ಷನ್‌ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಬಳಿ ಸ್ಕೂಟರ್ ನಿಧಾನಗೊಳಿಸಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಯುವಕ ಸಾವು

ಮೂಡುಬಿದಿರೆ: ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕ ಅಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಿದ್ಯಾಗಿರಿಯಲ್ಲಿ ನಡೆದಿದೆ.ಉತ್ತರ ಪ್ರದೇಶದ ಸಾಂಬಾಲ್ ಜಿಲ್ಲೆಯ ರಾಯೀಸ್ ಅಹಮ್ಮದ್ ಎಂಬವರ ಪುತ್ರ ಸಮೀರ್ (19) ಮೃತಪಟ್ಟ ಯುವಕ.

ಸಮೀರ್ ಕಳೆದ ಎರಡು ತಿಂಗಳ ಹಿಂದೆ ಆಳ್ವಾಸ್ ಸಂಸ್ಥೆಗೆ ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡಿದ್ದು ಮಂಗಳವಾರ ಶಾಂಭವಿ ಹಾಸ್ಟೆಲ್ ನ 5ನೇ ಮಹಡಿಯ ರೋಪ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲುಜಾರಿ ಕೆಳಗೆ ಬಿದ್ದಿದ್ದು ಈ ಸಂದರ್ಭ ತಲೆ ಮತ್ತು ಕಾಲಿಗೆ ತೀವ್ರ ತರಹದ ಗಾಯಗಳಾಗಿ ಅಧಿಕ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.