ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡ ಹುಲಿ

| Published : Apr 13 2024, 01:04 AM IST

ಸಾರಾಂಶ

ಬಾಳೆ ತೋಟದೊಳಗಿದ್ದ ಹುಲಿಯೊಂದನ್ನು ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಪ್ರಯತ್ನ ವಿಫಲವಾದ ಘಟನೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಾಳೆ ತೋಟದೊಳಗಿದ್ದ ಹುಲಿಯೊಂದನ್ನು ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಪ್ರಯತ್ನ ವಿಫಲವಾದ ಘಟನೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಬಳಿ ನಡೆದಿದೆ.ಗ್ರಾಮದ ವೃಷಬೇಂದ್ರಪ್ಪ ಅವರಿಗೆ ಸೇರಿದ ಬಾಳೆ ತೋಟದಲ್ಲಿ ಹುಲಿ ಇರುವುದನ್ನು ಕಂಡು ರೈತರು ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತ ಅರಣ್ಯ ಇಲಾಖೆ ಬಾಳೆ ತೋಟಕ್ಕೆ ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ಎಸಿಎಫ್‌, ಆರ್‌ಎಫ್‌ಒಗಳು ಹಾಗೂ ಸಿಬ್ಬಂದಿ ಧಾವಿಸಿ ಹುಲಿ ಸೆರೆ ಹಿಡಿಯಲು ಬಂಡೀಪುರ ಡಿಸಿಎಫ್‌ ಪ್ರಭಾಕರನ್‌ರೊಂದಿಗೆ ಚರ್ಚಿಸಿದರು. ಪಶುವೈದ್ಯ ವಾಸೀಂ ಮಿರ್ಜಾ ಸ್ಥಳಕ್ಕೆ ಕರೆಸಿ ಬಾಳೆ ತೋಟದಲ್ಲಿದ್ದ ಹುಲಿ ಸೆರೆಯಲು ಜೀಪಿನಲ್ಲಿ ಬಾಳೆ ತೋಟದೊಳಗೆ ನುಗ್ಗುವ ವೇಳೆಗೆ ಸ್ಥಳದಲ್ಲಿದ್ದ ಜನರು ಕೂಗಿಕೊಂಡರು. ಗದ್ದಲ ಸದ್ದಿಗೆ ಹುಲಿ ಬಾಳೆ ತೋಟದಿಂದ ಓಡಿ ಭೀಮನ ಬೀಡು ಗ್ರಾಮದತ್ತ ಹೋಗಿದೆ ಎನ್ನಲಾಗಿದೆ. ಬಾಳೆ ತೋಟದಲ್ಲಿದ್ದ ಹುಲಿಯನ್ನು ಸೆರೆ ಹಿಡಿಯಲು ವಿಫಲವಾದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿದರು.

ಹುಲಿ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಬೀಡು ಬಿಟ್ಟಿದ್ದ ವೇಳೆ ಬಾಳೆ ತೋಟದಿಂದ ತಪ್ಪಿಸಿಕೊಂಡ ಓಡುತ್ತಿದ್ದ ಹುಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಘಟನೆ ತಾಲೂಕಿನ ಹೊನ್ನೇಗೌಡನಹಳ್ಳಿ ಬಳಿ ನಡೆದಿದೆ. ಗ್ರಾಮದ ಮನು (೨೨) ಯುವಕ ಗಾಯಗೊಂಡಿದ್ದು, ಯುವಕನ ತಲೆ, ಎಡಗೈಗೆ ಪರಚಿದ್ದು ಪ್ರಾಣಾಪಾಯದಿಂದ ಯುವಕ ಪಾರಾಗಿದ್ದಾನೆ. ಎಸಿಎಫ್‌ಗಳಾದ ನವೀನ್‌,ಜಿ.ರವೀಂದ್ರ, ಆರ್‌ಎಫ್‌ಒಗಳಾದ ಮಂಜುನಾಥ್‌, ದೀಪಾ, ಸತೀಶ್‌ ಕುಮಾರ್‌, ನರೇಂದ್ರ, ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ, ಎಸ್‌ಟಿಪಿಎಫ್‌ ಸಿಬ್ಬಂದಿ ಇದ್ದರು.