ಕಿಕ್ಕೇರಮ್ಮ ಜಾತ್ರೆಗೆ ರಂಗೇರಿಸಿದ ರಂಗನ ಕುಣಿತ

| Published : Apr 13 2024, 01:03 AM IST

ಸಾರಾಂಶ

ಉಪ್ಪರಿಕೆ ಬಸವಣ್ಣನಿಂದ ಆರಂಭವಾದ ರಂಗನಕುಣಿತದಲ್ಲಿ ನೂರಾರು ಯುವಕರು ಹಿರಿಯರೊಂದಿಗೆ ಜೊತೆಗೂಡಿ ತಮಟೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

ಕಿಕ್ಕೇರಿ: ತಾಲೂಕಿನ ಪ್ರತಿಷ್ಠಿತ ಕಿಕ್ಕೇರಮ್ಮನ ಜಾತ್ರೆಯಲ್ಲಿ ರಂಗನಕುಣಿತ ಸಂಭ್ರಮದಿಂದ ನಡೆಯಿತು. ಏಳು ದಿನಗಳ ಕಾಲ ನಡೆಯುವ ಜಾತ್ರೆಗೆ ಮೊದಲ ದಿನವಾದ ಗುರುವಾರ ಭಕ್ತರು ದೇವಿಗೆ ರಂಗನಕುಣಿತದ ಮೂಲಕ ತಮ್ಮ ಭಕ್ತಿ ಸೇವೆ ಅರ್ಪಿಸಿದರು. ಹುಡುಗರು ಹಿರಿಯರೊಂದಿಗೆ ಹೆಜ್ಜೆ ಹಾಕುವ ಮೂಲಕ ರಂಗನಕುಣಿತದಲ್ಲಿ ಭಾಗವಹಿಸಿದ್ದರು. ಉಪ್ಪರಿಕೆ ಬಸವಣ್ಣನಿಂದ ಆರಂಭವಾದ ರಂಗನಕುಣಿತದಲ್ಲಿ ನೂರಾರು ಯುವಕರು ಹಿರಿಯರೊಂದಿಗೆ ಜೊತೆಗೂಡಿ ತಮಟೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ತೆಂಗಿನಘಟ್ಟದ ತಮಟೆ ಕಲಾವಿದರು ರಂಗಕುಣಿತಕ್ಕೆ ವಿಶೇಷ ಹೃನ್ಮಾದ ನೀಡುವಂತೆ ತಮಟೆ ಬಡಿದು ರೋಮಾಂಚನಗೊಳಿಸಿದರು. ರಥ ಬೀದಿ, ಹೊಸ ಬೀದಿಯಲ್ಲಿ ಸಾಗಿ ಅಂತಿಮವಾಗಿ ಊರ ಹೊರಗಿನ ಕಿಕ್ಕೇರಮ್ಮನ ಗುಡಿಗೆ ಸಾಗಿ ರಂಗನ ಕುಣಿತವನ್ನು ದೇವಿಗೆ ಒಪ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ರಜೆಯಲ್ಲಿದ್ದ ಪುಟಾಣಿಗಳು, ದೂರದ ಊರಿನಿಂದ ಬಂದಿದ್ದ ಯುವಕರು ರಂಗನಕುಣಿತದಲ್ಲಿ ಭಾಗಿಯಾಗಿದ್ದರು. ರಂಗನಕುಣಿತ ಕಲಾವಿದರಾದ ಕೆ.ಎನ್. ನಾಗೇಗೌಡ, ಕೆ.ವಿ. ಅರುಣಕುಮಾರ್, ಕಾಯಿ ಮಂಜೇಗೌಡ, ಸಿಪಾಯಿ ಲೋಕೇಶ್, ಕಾಯಿ ಸುರೇಶ್, ಕೆ.ಎನ್. ಪುಟ್ಟೇಗೌಡ, ಕೆ.ಪಿ.ಮಧುಕರ್, ಅಕ್ಷಯ್, ಸತ್ಯ, ಉಮೇಶ್, ಕೆ.ಜಿ.ಪುಟ್ಟರಾಜು ಮತ್ತಿತರರಿದ್ದರು.