ಶಾಲಾ ಕೊಠಡಿ ಮೇಲೆ ಬಿದ್ದ ಮರ: ತಪ್ಪಿದ ಅವಘಡ

| Published : May 17 2024, 12:32 AM IST

ಸಾರಾಂಶ

ಗುರುವಾರ ಮಧ್ಯಾಹ್ನ ಗಾಳಿಮಳೆಗೆ ಈ ಮರ ಬಿದ್ದಿದ್ದು, ಎರಡು ಕೊಠಡಿಗಳ ಚಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ.

ಯಲ್ಲಾಪುರ: ಅರಣ್ಯ ಇಲಾಖೆಯ ಆವರಣದಲ್ಲಿದ್ದ ಬೃಹದಾಕಾರದ ಮರವೊಂದು ಪಕ್ಕದಲ್ಲಿದ್ದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕಟ್ಟಡದ ಮೇಲೆ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ.

ಗುರುವಾರ ಮಧ್ಯಾಹ್ನ ಗಾಳಿಮಳೆಗೆ ಈ ಮರ ಬಿದ್ದಿದ್ದು, ಎರಡು ಕೊಠಡಿಗಳ ಚಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ. ಅಲ್ಲದೇ ಶೌಚಾಲಯಕ್ಕೂ ಹಾನಿಯಾಗಿದೆ. ಚಾವಣಿ ಡೆಸ್ಕ್‌ಗಳ ಮೇಲೆ ಬಿದ್ದ ಪರಿಣಾಮ ಕೆಲ ಬೆಂಚ್‌ಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಶಾಲೆಗೆ ರಜೆ ಇರುವ ಕಾರಣಕ್ಕೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅವಘಡದಿಂದ ಸುಮಾರು ₹12 ಲಕ್ಷ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಪಿಎಸ್‌ಐ ವಿರುದ್ಧ ಗ್ರಾಪಂ ಸದಸ್ಯರಿಂದ ದೂರು

ಹೊನ್ನಾವರ: ಇಲ್ಲಿನ ಪೊಲೀಸ್ ಠಾಣೆಯ ಪಿಎಸ್‌ಐ ಅಗೌರವದಿಂದ ವರ್ತಿಸಿದ್ದಾರೆ ಎಂದು ಕರ್ಕಿ ಗ್ರಾಮ ಪಂಚಾಯಿತಿ ಸದಸ್ಯರು ಬುಧವಾರ ಪೊಲೀಸ್ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.ಕರ್ಕಿ ಗ್ರಾಮ ಪಂಚಾಯಿತಿಯ ರಾಮೇಶ್ವರಕಂಬಿ ವಾರ್ಡಿನ ಸದಸ್ಯ ಗಜಾನನ ನಾಯ್ಕ ಮತ್ತು ಅಧ್ಯಕ್ಷರು ಹಾಗೂ ಇತರ ಸದಸ್ಯರು ಈ ಕುರಿತು ಬುಧವಾರ ದೂರು ನೀಡಿದ್ದಾರೆ.ಪಿಎಸ್‌ಐ ಸಂತೋಷ ಕುಮಾರ ವರ್ತನೆಯಿಂದ ಜೀವ ಬೆದರಿಕೆ ಉಂಟಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಅವರ ಮೇಲೆ ಪ್ರಕರಣ ದಾಖಲಿಸಿ, ಇಲಾಖಾ ತನಿಖೆ ನಡೆಸಿ, ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯರಾದ ಗಜಾನನ ನಾಯ್ಕ, ಶ್ರೀಕಾಂತ ಮೊಗೇರ, ನಾಗರಾಜ ನಾಯ್ಕ, ನಾಗರಾಜ ಗೌಡ, ಹರೀಶ ನಾಯ್ಕ, ಸಾಧನಾ ಶಂಕರ ನಾಯ್ಕ ಇತರರರು ಆಗ್ರಹಿಸಿದ್ದಾರೆ.