ಬಿಸಿಲನಾಡು ಬಳ್ಳಾರಿ ಜಿಲ್ಲೆಯ ಸಂಡೂರಿನ ಹಸಿರುಟ್ಟ ಗುಡ್ಡ ಬೆಟ್ಟಗಳತ್ತ ಚಾರಣಿಗರ ಚಿತ್ತ

| Published : Sep 02 2024, 02:18 AM IST / Updated: Sep 02 2024, 10:08 AM IST

ಬಿಸಿಲನಾಡು ಬಳ್ಳಾರಿ ಜಿಲ್ಲೆಯ ಸಂಡೂರಿನ ಹಸಿರುಟ್ಟ ಗುಡ್ಡ ಬೆಟ್ಟಗಳತ್ತ ಚಾರಣಿಗರ ಚಿತ್ತ
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲನಾಡು ಬಳ್ಳಾರಿ ಜಿಲ್ಲೆಯ ಕಾಶ್ಮೀರ ಎಂದು ಹೆಸರಾಗಿರುವ ಸಂಡೂರಿನ ಬೆಟ್ಟಗುಡ್ಡಗಳಲ್ಲಿನ ನೈಸರ್ಗಿಕ ಸೌಂದರ್ಯ ಆಸ್ವಾದಿಸಲು ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಚಾರಣಿಗರು ಆಗಮಿಸುತ್ತಿದ್ದಾರೆ

ವಿ.ಎಂ. ನಾಗಭೂಷಣ

ಸಂಡೂರು: ಬಿಸಿಲನಾಡು ಬಳ್ಳಾರಿ ಜಿಲ್ಲೆಯ ಕಾಶ್ಮೀರ ಎಂದು ಹೆಸರಾಗಿರುವ ಸಂಡೂರಿನ ಬೆಟ್ಟಗುಡ್ಡಗಳಲ್ಲಿನ ನೈಸರ್ಗಿಕ ಸೌಂದರ್ಯ ಆಸ್ವಾದಿಸಲು ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಚಾರಣಿಗರು ಆಗಮಿಸುತ್ತಿದ್ದಾರೆ.

ತಾಲೂಕಿನಲ್ಲಿ 35000 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವಿದೆ. ಇದನ್ನು ದೋಣಿಮಲೈ, ಸ್ವಾಮಿಮಲೈ, ಈಶಾನ್ಯ ಹಾಗೂ ರಾಮನಮಲೈ ಅರಣ್ಯವೆಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇಲ್ಲಿ ಚಾರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಭೀಮತೀರ್ಥ, ರಾಮಘಡ, ಉಬ್ಬಲಗಂಡಿ ಹಾಗೂ ಕುಮಾರಸ್ವಾಮಿ ದೇವಸ್ಥಾನ ಚಾರಣ ಪಥಗಳನ್ನೊಳಗೊಂಡ ಒಟ್ಟು ನಾಲ್ಕು ಚಾರಣ ಪಥಗಳನ್ನು ಗುರುತಿಸಿ, ಸಂಡೂರಿನ ಅನ್ವೇಷಣೆ (ಎಕ್ಸ್‌ಪ್ಲೋರಿಂಗ್ ಸಂಡೂರ್) ಎಂಬ ಕಾರ್ಯಕ್ರಮ ರೂಪಿಸಿದೆ. ಚಾರಣ ಪಥಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಾಗಿ ಆಗಮಿಸುವ ಚಾರಣಿಗರು ಇಲ್ಲಿನ ಹಸಿರುಟ್ಟ ಬೆಟ್ಟಗುಡ್ಡಗಳು, ಅವುಗಳನ್ನು ಮುತ್ತಿಕ್ಕುತ್ತಾ ಸಾಗುವ ಮೋಡಗಳು, ಜಿನುಗುವ ಮಳೆ, ಬೆಟ್ಟಗುಡ್ಡಗಳಲ್ಲಿ ಉಂಟಾಗಿರುವ ಚಿಕ್ಕ ಜಲಪಾತಗಳು, ಅಲ್ಲಿನ ವೈವಿಧ್ಯಮಯ ಸಸ್ಯವರ್ಗಗಳನ್ನು ಆಸ್ವಾದಿಸಿ, ಕಣ್ಮನ ತುಂಬಿಕೊಳ್ಳುತ್ತಾರೆ. ಅದೃಷ್ಟವಿದ್ದರೆ ಇಲ್ಲಿನ ವನ್ಯಜೀವಿಗಳನ್ನು ಕಾಣಬಹುದಾಗಿದೆ.

ಅರಣ್ಯ ಹೊಕ್ಕರೆ ಸಾಕು ನವಿಲುಗಳ ಧ್ವನಿ ಕಿವಿಗೆ ತಲುಪುವುದು ಗ್ಯಾರಂಟಿ. ಆದರೆ, ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಚಾರಣಕ್ಕೆ ಬರುವವರು ಅರಣ್ಯ ಇಲಾಖೆಯ ಸಿಬ್ಬಂದಿ ಅಥವಾ ಸ್ಥಳೀಯರ ಸಹಕಾರ, ಮಾರ್ಗದರ್ಶನ ಪಡೆಯುವುದು ಒಳ್ಳೆಯದು.

ಸಂಡೂರಿನಲ್ಲಿಯೇ ಸಂಡೂರು ಸಮ್ಮಿಟರ್ಸ್ ಎಂಬ ಚಾರಣಿಗರ ತಂಡವಿದೆ. ಈ ತಂಡದವರು ಸಮಾನ ಮನಸ್ಕರ ಜತೆಗೆ ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಚಾರಣ ನಡೆಸುತ್ತಾರೆ. ರಾಜ್ಯದ ವಿವಿಧೆಡೆಯಿಂದ ಬರುವ ಚಾರಣಿಗರು ಸಂಡೂರು ಸಮ್ಮಿಟರ್ಸ್ ತಂಡದ ಸದಸ್ಯರ ಸಹಕಾರ ಪಡೆಯುತ್ತಾರೆ.

ಆ. 31, ಸೆ. 1 ರಂದು ಮೈಸೂರಿನ ಬಾಂಧವ್ಯ ಚಾರಣಿಗರ ಬಳಗದ ೨೨ರಿಂದ ೬೮ ವಯೋಮಾನದ ಒಟ್ಟು ೨೯ ಸದಸ್ಯರು ಸಂಡೂರು ಸಮ್ಮಿಟರ್ಸ್ ತಂಡದ ಸದಸ್ಯರಾದ ಗಡಿಯಾರಂ ನಾಗೇಂದ್ರ ಕಾವೂರ್, ಜಟಿಂಗರಾಜು ನೇತೃತ್ವದಲ್ಲಿ ಸಂಡೂರಿನ ಬೆಟ್ಟ ಗುಡ್ಡಗಳಲ್ಲಿ ಚಾರಣ ನಡಸಿ, ಇಲ್ಲಿನ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

ಈ ತಂಡ ತಮ್ಮ ಎರಡು ದಿನದ ಚಾರಣ ಕಾರ್ಯಕ್ರಮದಲ್ಲಿ ದೋಣಿಮಲೈ ಅರಣ್ಯ ವಲಯದಲ್ಲಿ ಬರುವ ಭೀಮಗಂಡಿ, ಕೊಲ್ಲಾರಮ್ಮನ ಅಂಗಳದ ಮೂಲಕ ಭೈರವ ತೀರ್ಥದ ಹಿಂಬದಿಯವರೆಗೆ ಸಾಗಿ, ಅಲ್ಲಿನ ಭೈರವತೀರ್ಥ ಜಲಪಾತ (ಸ್ಥಳೀಯರು ಕರೆಯುವ ಮೇಗಳ ನೀರು), ನಾರಿಹಳ್ಳ ಜಲಾಶಯ, ಭೀಮತೀರ್ಥ, ಶ್ರೀಕುಮಾರಸ್ವಾಮಿ ಹಾಗೂ ಧರ್ಮಾಪುರದ ಬಳಿಯ ವ್ಯೂ ಪಾಯಿಂಟ್‌ಗಳನ್ನು ವೀಕ್ಷಿಸಿ, ವಿಪುಲವಾದ ಮತ್ತು ಅವಿಸ್ಮರಣೀಯ ಅನುಭವಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.

ಮೈಸೂರಿನ ಬಾಂಧವ್ಯ ಚಾರಣಿಗರ ಬಳಗದ ನಾಗೇಂದ್ರ ಪ್ರಸಾದ್, ವೈದ್ಯನಾಥನ್, ಉಮಾಶಂಕರ್, ದತ್ತಾತ್ರೇಯ ಸಂಡೂರು ಭಾಗದಲ್ಲಿನ ತಮ್ಮ ಚಾರಣ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿ, ನಾವು ಈ ವರೆಗೆ ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ೯೦ ಚಾರಣ ಕಾರ್ಯಕ್ರಮ ನಡೆಸಿದ್ದೇವೆ. ಸಂಡೂರಿನಲ್ಲಿಯ ಚಾರಣ 91ನೆಯದ್ದು. ಗಡಿಯಾರಂ ನಾಗೇಂದ್ರ ಕಾವೂರ್ ಅವರ ಮೂಲಕ ಸಂಡೂರಿನ ಸುಂದರ ಪರಿಸರದ ವಿಷಯ ತಿಳಿದು, ನಾವು ಸಂಡೂರು ಬೆಟ್ಟಗುಡ್ಡಗಳಲ್ಲಿ ಚಾರಣ ಹಮ್ಮಿಕೊಂಡಿದ್ದೇವೆ.

ಸಂಡೂರು ಎಂದಾಗ ಇಲ್ಲಿನ ಗಣಿಗಾರಿಕೆಯಿಂದಾಗಿ ನಮ್ಮ ಅಭಿಪ್ರಾಯ ಬೇರೆಯಾಗಿತ್ತು. ಆದರೆ, ಇಲ್ಲಿನ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದ ಬೆಟ್ಟಗುಡ್ಡಗಳಲ್ಲಿ ಸುತ್ತಾಡಿದಾಗ, ಇಲ್ಲಿನ ಪ್ರಕೃತಿ ಸೌಂದರ್ಯ, ಕುರುಚಲು ಕಾಡು, ಗಿಡಮರಗಳ ಮಧ್ಯ ಬೆಳೆದ ಹುಲ್ಲು, ಅವುಗಳ ಮೇಲೆ ಮುತ್ತಿನಂತೆ ಕುಳಿತ ಮಳೆ ಹನಿಗಳು ನಮ್ಮನ್ನು ಬಹುವಾಗಿ ಆಕರ್ಷಿಸಿದವು.

ಮನೆಗಳ ಬಳಿ ಕಂಡು ಬರುವ ಶಂಕು, ಕರ್ಣಕುಂಡಲ, ತುಂಬೆ ಮುಂತಾದ ಹೂಗಳು ಅರಣ್ಯದಲ್ಲಿ ಕಂಡಿದ್ದು ನಮಗೆ ಅಚ್ಚರಿ ಮೂಡಿಸಿತು. ನಮಗೆ ಸಂಡೂರಿನ ಚಾರಣ ಖುಷಿ ನೀಡಿದೆ. ಇಲ್ಲಿನ ನಿಸರ್ಗ ನೋಡಿದ ಮೇಲೆ ಮತ್ತೆ ಮತ್ತೆ ಬರಬೇಕೆಂಬ ಮನಸ್ಸಾಗಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಉತ್ತರ ಕರ್ನಾಟಕದ ಆಕ್ಸಿಜನ್ ಟ್ಯಾಂಕ್, ಬಿಸಿಲ ನಾಡಿನ ಓಯಸಿಸ್ ಎಂದು ಹೆಸರಾದ ಸಂಡೂರಿನ ಅರಣ್ಯ ಪ್ರದೇಶವನ್ನು ಆಸ್ವಾದಿಸಲು ಮತ್ತು ತಮ್ಮ ಕಣ್ಮನವನ್ನು ತುಂಬಿಕೊಳ್ಳಲು ಪ್ರವಾಸಿಗರು ಹಾಗೂ ಚಾರಣಿಗರು ಸಂಡೂರಿನತ್ತ ಆಗಮಿಸುತ್ತಿರುವುದು ಈ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

ಸಂಡೂರಿನ ಸುತ್ತಮುತ್ತಲಿನ ನಿಸರ್ಗ ಸೌಂದರ್ಯ ಆಸ್ವಾದಿಸಲು ಬರುವ ಚಾರಣಿಗರ ಸಂಖೆ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಈ ಸಂಖ್ಯೆ ತುಂಬ ಹೆಚ್ಚುತ್ತದೆ ಎನ್ನುತ್ತಾರೆ ಸಂಡೂರು ವಲಯ ಅರಣ್ಯಾಧಿಕಾರಿ ದಾದಾ ಖಲಂದರ್.