ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ

| Published : Aug 03 2024, 01:34 AM IST / Updated: Aug 03 2024, 06:14 AM IST

ಸಾರಾಂಶ

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮೊದಲ ತಂಡವು ಅಕ್ಟೋಬರ್‌ ವೇಳೆಗೆ ಅಧ್ಯಯನ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ತೆರಳಲಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮೊದಲ ತಂಡವು ಅಕ್ಟೋಬರ್‌ ವೇಳೆಗೆ ಅಧ್ಯಯನ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ತೆರಳಲಿದೆ.

ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಬಿಬಿಎಂಪಿಯ ಸಹಯೋಗದಲ್ಲಿ ಈ ಪ್ರವಾಸ ಆಯೋಜನೆ ಮಾಡಲಾಗುತ್ತಿದೆ. ಬಿಬಿಎಂಪಿಯ ವಾರ್ಡ್‌ಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ಆಯ್ಕೆ ಮಾಡಿ ಪ್ರವಾಸಕ್ಕೆ ಕಳುಹಿಸುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪೌರಕಾರ್ಮಿಕರ ಆಯ್ಕೆ ಹಾಗೂ ಅವರಿಗೆ ಪಾಸ್‌ಪೋರ್ಟ್‌ ಮತ್ತು ವೀಸಾ ಸೇರಿದಂತೆ ಅಗತ್ಯ ದಾಖಲಾತಿ ಸಿದ್ಧಪಡಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಕ್ಟೋಬರ್‌ ವೇಳೆಗೆ 225ರಿಂದ 243 ಮಂದಿ ಪೌರಕಾರ್ಮಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ಹಾರಲಿದ್ದಾರೆ.

ಈಗಾಗಲೇ ದಾವಣಗೆರೆ ಮಹಾನಗರ ಪಾಲಿಕೆ, ತುಮಕೂರು ಮಹಾನಗರ ಪಾಲಿಕೆ ಹಾಗೂ ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಒಟ್ಟು 70 ಪೌರಕಾರ್ಮಿಕರು ಸಿಂಗಾಪುರದ ಅಧ್ಯಯನ ಪ್ರವಾಸ ಮಾಡಿ ವಾಪಾಸ್‌ ಆಗಿದ್ದಾರೆ.

5 ತಂಡದಲ್ಲಿ ಪ್ರವಾಸ:

ವಾರ್ಡ್‌ಗೆ ಒಬ್ಬರಂತೆ ಪ್ರವಾಸಕ್ಕೆ ಪೌರಕಾರ್ಮಿಕರ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯ ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ಆಯ್ಕೆಯಾದ ಪೌರಕಾರ್ಮಿಕರು ಐದು ತಂಡದಲ್ಲಿ ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದು ತಂಡದಲ್ಲಿ 40ರಿಂದ 50 ಮಂದಿ ಮಾತ್ರ ಅವಕಾಶ ಇರುವುದರಿಂದ ಐದು ತಂಡದಲ್ಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪೌರಕಾರ್ಮಿಕರೊಂದಿಗೆ ಬಿಬಿಎಂಪಿ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಲಾ ಒಬ್ಬ ಅಧಿಕಾರಿಗಳು ತೆರಳಿದ್ದಾರೆ. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ಗೆ (ಎಂಎಸ್ಐಎಲ್) ಪ್ರವಾಸದ ಉಸ್ತುವಾರಿ ವಹಿಸಲಾಗುತ್ತದೆ.

3 ದಿನ ವಾಸ್ತವ್ಯ

ಬಿಬಿಎಂಪಿಯ ಪೌರಕಾರ್ಮಿಕರು ಸಿಂಗಾಪುರದಲ್ಲಿ ಮೂರು ದಿನ ವಾಸ್ತವ್ಯ ಮಾಡಲಿದ್ದಾರೆ. ಮೂರು ದಿನದಲ್ಲಿ ಸುಮಾರು ಐದಾರು ಗಂಟೆಯ ಕಾಲ ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯದ ಬಗ್ಗೆ ವಿಶೇಷ ತರಗತಿ ನಡೆಸಲಾಗುತ್ತದೆ. ಜತೆಗೆ, ಕ್ಷೇತ್ರ ವೀಕ್ಷಣೆ ನಡೆಸಲಿದ್ದಾರೆ. ಪಂಚತಾರಾ ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆ, ಭಾರತೀಯ ಶೈಲಿಯ ಊಟ, ಉಪಹಾರ ವ್ಯವಸ್ಥೆ ಮಾಡಲಾಗುತ್ತದೆ.

ಸ್ವಚ್ಛತೆ ಬಗ್ಗೆ ಅಧ್ಯಯನ

ಸಿಂಗಾಪುರದಲ್ಲಿ ಮ್ಯಾನ್‌ ಹೋಲ್‌ ಸ್ವಚ್ಛತೆಗೆ ಬಳಕೆ ಮಾಡುವ ನವೀಕೃತ ತಂತ್ರಜ್ಞಾನ ವೀಕ್ಷಣೆ, ಜತೆಗೆ ನಗರದಲ್ಲಿ ಸ್ವಚ್ಛತಾ ಪ್ರಕ್ರಿಯೆ, ವೈಜ್ಞಾನಿಕ ಕಸ ವಿಲೇವಾರಿ, ಒಳಚರಂಡಿ ಸ್ವಚ್ಛತೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ), ತ್ಯಾಜ್ಯ ನೀರು ಮರು ಬಳಕೆ ವಿಧಾನ, ಸುರಕ್ಷತೆ ಸೇರಿದಂತೆ ಹಲವು ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಅಲ್ಲಿನ ಕಾರ್ಮಿಕರು ಸ್ವಚ್ಛತಾ ಕೆಲಸಕ್ಕೆ ಆಧುನಿಕ ಪರಿಕರಗಳ ಮೊರೆ ಹೋಗಿದ್ದಾರೆ. ಅದೇ ಮಾದರಿಯನ್ನು ರಾಜಧಾನಿ ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲು ಅಧ್ಯಯನ ಪ್ರವಾಸ ಮಹತ್ವ ಪಡೆದಿದೆ.

ತಲಾ ₹1.5 ಲಕ್ಷ ವೆಚ್ಚ

ಪೌರಕಾರ್ಮಿಕರ ಸಿಂಗಾಪುರ ಪ್ರವಾಸಕ್ಕೆ ತಲಾ ಒಬ್ಬರಿಗೆ ಸುಮಾರು ₹1.5 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವೆಚ್ಚದಲ್ಲಿ ಶೇ.50 ರಷ್ಟು ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ. ಉಳಿದ ಶೇ.50ರಷ್ಟು ಅನುದಾನವನ್ನು ಬಿಬಿಎಂಪಿ ಭರಿಸಲಿದೆ.2023-24ನೇ ಸಾಲಿನ ಯೋಜನೆಯಡಿ ಪೌರಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಪ್ರವಾಸಕ್ಕೆ ತೆರಳುವ ಪೌರ ಕಾರ್ಮಿಕರ ಪಟ್ಟಿ, ಅಗತ್ಯ ದಾಖಲೆ ಸೇರಿದಂತೆ ಶೇ.50ರಷ್ಟು ಪ್ರವಾಸದ ವೆಚ್ಚ ಬಿಬಿಎಂಪಿಯು ಭರಿಸುತ್ತಿದಂತೆ ಪ್ರವಾಸ ಆಯೋಜಿಸಲಾಗುವುದು.

-ಮಲ್ಲಿಕಾರ್ಜುನ್‌, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ.