ಸಾರಾಂಶ
ಚಿಕ್ಕಮಗಳೂರು,ಇತಿಹಾಸ ಅಧ್ಯಯನಕ್ಕೆ ಸಹಕಾರಿಯಾಗಿರುವ ಆಧಾರಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಹೇಳಿದರು.
ಶಾಸನಗಳ ಮಹತ್ವ ಮತ್ತು ಶಾಸನ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇತಿಹಾಸ ಅಧ್ಯಯನಕ್ಕೆ ಸಹಕಾರಿಯಾಗಿರುವ ಆಧಾರಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಹೇಳಿದರು.
ತಾಲೂಕು ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ತಾಲೂಕಿನ ಮರ್ಲೆ ಗ್ರಾಮದ ಚನ್ನಕೇಶವ ಸಿದ್ದೇಶ್ವರ ಜೋಡಿ ಆಲಯಗಳ ಆವರಣದಲ್ಲಿ ಆಯೋಜಿಸಿದ್ದ ಶಾಸನಗಳ ಮಹತ್ವ ಮತ್ತು ಶಾಸನ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಇತಿಹಾಸ ನಮಗೆ ನಮ್ಮ ಪೂರ್ವಜರ ಘತಕಾಲದ ಘಟನೆಗಳು, ಅವರ ಜೀವನ ಶೈಲಿ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಆಡಳಿತ ಪದ್ಧತಿ, ಸಂಸ್ಕೃತಿ ಮತ್ತು ಅವರ ಜೀವನದ ಕಾಲಘಟ್ಟ ತಿಳಿಸಿ ಕೊಡುತ್ತದೆ. ಇತಿಹಾಸ ತಿಳಿಯಲು ಶಾಸನ, ಸ್ಮಾರಕ, ನಾಣ್ಯಗಳು, ದೇವಾಲಯ ಲೋಹಗಳು ಹಾಗೂ ವಿವಿಧ ಉಪಕರಣಗಳು ಸಹಕರಿಸುತ್ತವೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.ಶಾಸನಗಳು ಎಂದರೆ ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದವುಗಳ ಮೇಲಿನ ಬರಹ. ಮೂಲತಃ ಶಾಸನ ಎಂಬುದು ದಾನ ಸಂಬಂಧವಾದ ರಾಜಾಜ್ಞೆಯಾಗಿದೆ. ಶಾಶ್ವತವಾದ ಯಾವುದೇ ಬಗೆಯ ದಾಖಲೆಗಳೇ ಶಾಸನಗಳು. ಇವುಗಳು ಐತಿಹಾಸಿಕ ಪರಂಪರೆ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶಗಳಾಗಿವೆ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು ಎಂದು ಹೇಳಿದರು.ಶಾಸನಗಳನ್ನು ದೇವಾಲಯಗಳು, ವೀರಗಲ್ಲುಗಳು ಹಾಗೂ ಗೋಡೆಗಳಲ್ಲಿ ರಚಿಸಲಾಗುತಿತ್ತು, ಭೂಮಿಯಲ್ಲಿ ದೊರಕುವ ಯಾವುದೇ ಇತಿಹಾಸ ತಿಳಿಸುವ ಆಧಾರಗಳನ್ನು ಸಂರಕ್ಷಿಸಿ ಇತಿಹಾಸ ಅಧ್ಯಯನಕ್ಕೆ ಹಾಗೂ ಅವುಗಳ ಉಳಿವಿಗೆ ಕ್ರಮವಹಿಸಬೇಕು. ನಮ್ಮ ಪರಂಪರೆ ನಾಡಿನ ಶ್ರೀಮಂತಿಕೆಯನ್ನು ಮಕ್ಕಳಿಗೆ ತಿಳಿಸಲು ಇವುಗಳ ಅವಶ್ಯಕತೆ ಬಹಳಷ್ಟಿದೆ. ಪ್ರತಿಯೊಂದು ಊರುಗಳಲ್ಲಿ ಇತಿಹಾಸ ತಿಳಿಸುವ ಆಧಾರಗಳು ದೊರಕುತ್ತವೆ ಅವುಗಳನ್ನು ಗುರುತಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅವುಗಳ ಅಧ್ಯಯನ ಮಾಡಲು ಸಹಕರಿಸಿ ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಜಿ. ತಾರಾನಾಥ್ ಮಾತನಾಡಿ, ಇತಿಹಾಸ ನಮ್ಮ ಬದುಕಿನ ದಾರಿ ದೀಪ. ಇತಿಹಾಸ ಅಧ್ಯಯನ ಸಮಯದ ಮೂಲಕ ವಿಷಯಗಳನ್ನು ಸಂಪರ್ಕಿಸುತ್ತವೆ. ನಮ್ಮ ಅಸ್ತಿತ್ವದ ಮೂಲಗಳನ್ನು ವಿವರಿಸುತ್ತವೆ. ನಾವು, ನಮ್ಮ ಸಮಾಜ , ಮತ್ತು ನಮ್ಮ ಸಂಸ್ಕೃತಿ ಹೇಗೆ ರೂಪುಗೊಂಡಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಇತಿಹಾಸ ತಿಳಿಸಿಕೊಡುವ ಆಧಾರ ಸಂರಕ್ಷಿಸು ವುದು ಅವಶ್ಯಕ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಆ ಗ್ರಾಪಂ ವ್ಯಾಪ್ತಿಯಲ್ಲಿ ದೊರಕುವ ಐತಿಹಾಸಿಕ ದೇವಾಲಯಗಳು, ಸ್ಮಾರಕ, ವೀರಗಲ್ಲುಗಳು, ಮತ್ತು ಶಾಸನಗಳನ್ನು ಗುರುತಿಸಿ ಅವು ಯಾವ ಕಾಲ ಘಟ್ಟಕ್ಕೆ ಸಂಬಧಿಸಿದವುಗಳೆಂಬ ಮಾಹಿತಿ ಕಲೆ ಹಾಕಿ ಅವುಗಳ ಸಂರಕ್ಷಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಅಧಿಕಾರಿಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಒಂದುಗೂಡಿ ಐತಿಹಾಸಿಕ ಆಧಾರಗಳ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಮೈಸೂರಿನ ಭಾರತೀಯ ಪುರಾತತ್ವ ಇಲಾಖೆ ಶಾಸನತಜ್ಞೆ ಶ್ರೀದೇವಿ ತೇಜಸ್ವಿನಿ ಮರ್ಲೆ ಗ್ರಾಮದ ಚನ್ನಕೇಶವ ಸಿದ್ದೇಶ್ವರ ಜೋಡಿ ಆಲಯಗಳ ಆವರಣದ ಶಾಸನದ ಕುರಿತು ಶಾಸನ ರಚನಕಾರರು, ರಾಜಮನೆತನ, ಕಾಲಘಟ್ಟ ಮತ್ತು ಶಾಸನದಲ್ಲಿ ಉಲ್ಲೇಖ ವಾಗಿರುವ ವಿಷಯಗಳ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮರ್ಲೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ, ಮರ್ಲೆ ಗ್ರಾಪಂ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಲೀಲಾವತಿ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು,ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 4 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಚನ್ನಕೇಶವ ಸಿದ್ದೇಶ್ವರ ಜೋಡಿ ದೇಗುಲಗಳ ಆವರಣದಲ್ಲಿ ಆಯೋಸಿದ್ದ ಶಾಸನಗಳ ಮಹತ್ವ ಮತ್ತು ಶಾಸನ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿದರು.