ಸಾರಾಂಶ
ಪಟ್ಟಣದ ತಾಲೂಕು ಕ್ರೀಡಾಂಗಣದ ಹತ್ತಿರ ಇರುವ ನಿರುಪಯುಕ್ತವಾದ ವಸತಿ ನಿಲಯದ ಕೊಠಡಿಗಳು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿವೆ.
ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ । ಬಾಗಿಲು, ಕಿಟಕಿ ಒಡೆದ ಕಿಡಿಗೇಡಿಗಳು
ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿಪಟ್ಟಣದ ತಾಲೂಕು ಕ್ರೀಡಾಂಗಣದ ಹತ್ತಿರ ಇರುವ ನಿರುಪಯುಕ್ತವಾದ ವಸತಿ ನಿಲಯದ ಕೊಠಡಿಗಳು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿವೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ನಿರುಪಯುಕ್ತ ಕೊಠಡಿಗಳಲ್ಲಿ ಜೂಜಾಟ, ಮದ್ಯ ಸೇವನೆ, ಸಿಗರೇಟ್ ಸೇವನೆ ಸೇರಿದಂತೆ ಅನೇಕ ಚಟುವಟಿಕೆಗಳು ನಡೆಯುತ್ತಿದ್ದು, ಸಂಬಂಧಪಟ್ಟಂತಹ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಕಟ್ಟಡದಲ್ಲಿ ಸುಮಾರು 10 ಕೊಠಡಿಗಳು ಇದ್ದು, ಎಲ್ಲ ಉತ್ತಮವಾದ ಸ್ಥಿತಿಯಲ್ಲಿರುವಂತೆ ಗೋಚರಿಸುತ್ತವೆ. ಆದರೆ ಕಳೆದ ಸುಮಾರು ಎರಡು ವರ್ಷಗಳ ಹಿಂದೆ ಇಲ್ಲಿ ನಡೆಯುತ್ತಿದ್ದ ವಸತಿ ನಿಲಯವನ್ನು ಕೊಠಡಿಗಳು ವಾಸಕ್ಕೆ ಸರಿಯಾದವುಗಳಲ್ಲ ಎಂದು ಬೇರೆಡೆ ಸ್ಥಳಾಂತರ ಮಾಡಿರುವ ಹಿನ್ನೆಲೆ ಖಾಲಿಯಾದ ಕೊಠಡಿಗಳು ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿವೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕೊಠಡಿಗಳ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ಕಿಡಿಗೇಡಿಗಳು ಕೊಠಡಿಗಳ ಎಲ್ಲ ಬಾಗಿಲು, ಕಿಟಕಿಗಳನ್ನು ಒಡೆದು ಹಾಕಿದ್ದು, ಕೆಲವು ಸಾಮಗ್ರಿಗಳು ಕೂಡ ಕಳ್ಳರ ಪಾಲಾಗಿವೆ.ಮಲಮೂತ್ರ ವಿಸರ್ಜನೆ:ವಸತಿ ನಿಲಯದ 10 ಕೊಠಡಿಗಳನ್ನು ಕೆಲ ಪುಂಡರು ಮಲಮೂತ್ರ ವಿಸರ್ಜನೆಯ ತಾಣವಾಗಿ ಮಾಡಿಕೊಂಡಿದ್ದಾರೆ. ಇದರಿಂದ ಇಲ್ಲಿ ಕಾಲಿಟ್ಟರೆ ಸಾಕು ಯಾಕಾದರೂ ಬಂದಿದ್ದೇವೆ ಎನಿಸುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ದುರ್ವಾಸನೆ ಇದೆ.
ಇನ್ನು ಈ ಕಟ್ಟಡದ ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಹಾವು, ಚೇಳು, ನಾಯಿ, ಹಂದಿಗಳ ವಾಸಸ್ಥಾನವಾಗಿದೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಕೊಠಡಿಗಳು ವಾಸಕ್ಕೆ ಯೋಗ್ಯವಿಲ್ಲ ಎಂದು ಪಿಡಬ್ಲ್ಯೂಡಿ ಅವರು ವರದಿ ಆಧರಿಸಿ ವಸತಿ ನಿಲಯ ಸ್ಥಳಾಂತರ ಮಾಡಿದೆ. ಈಗ ಸುಮಾರು ₹3 ಕೋಟಿಗಳಲ್ಲಿ ಹೊಸ ಕಟ್ಟಡ ಮಂಜೂರಾತಿಯಾಗಿದ್ದು ಅವುಗಳನ್ನು ನೆಲಸಮಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರಿ ತಾಲೂಕು ಅಧಿಕಾರಿ ಶಿವಶಂಕರ ತಿಳಿಸಿದ್ದಾರೆ.