ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ವಿಸರ್ಜಿಸುತ್ತಿದ್ದಂತೆ ಚಟುವಟಿಕೆಯಿಂದ ಕೂಡಿರುತ್ತಿದ್ದ ವಿಧಾನಸೌಧ ಬಿಕೋ ಎನ್ನತೊಡಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ವಿಸರ್ಜಿಸುತ್ತಿದ್ದಂತೆ ಚಟುವಟಿಕೆಯಿಂದ ಕೂಡಿರುತ್ತಿದ್ದ ವಿಧಾನಸೌಧ ಬಿಕೋ ಎನ್ನತೊಡಗಿದೆ.ಸಚಿವರು, ಅಧಿಕಾರಿಗಳು, ಸಾರ್ವಜನಿಕರಿಂದ ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಶಕ್ತಿ ಸೌಧದಲ್ಲಿ ಶುಕ್ರವಾರದಿಂದಲೇ ಬಹುತೇಕ ಹಿರಿಯ ಅಧಿಕಾರಿಗಳು, ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತು. ಸರ್ಕಾರ ವಿಸರ್ಜನೆ ಆದೇಶ ಹೊರಡುತ್ತಿದ್ದಂತೆ ಕಚೇರಿಯ ಸಿಬ್ಬಂದಿ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಇರುವ ಸಚಿವರ ಹೆಸರಿನ ನಾಮಫಲಕ ತೆರವುಗೊಳಿಸಿ ಕಚೇರಿಗೆ ಬೀಗ ಹಾಕಿದರು.
ಹೆಚ್ಚಿನ ಕೆಲಸ ಇಲ್ಲದ ಕಾರಣ ಬಹುತೇಕ ಸಿಬ್ಬಂದಿ ಯಾವಾಗ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಯಾರ್ಯಾರು ಮಂತ್ರಿಗಳಾಗುತ್ತಾರೆ. ಯಾರು ಪುನಃ ಮಂತ್ರಿಯಾಗುತ್ತಾರೆ, ಹೊಸಬರು ಯಾರು ಸಚಿವರಾಗುತ್ತಾರೆ, ಯಾರಿಗೆ ಯಾವ ಖಾತೆ ದೊರೆಯಬಹುದು ಎಂಬ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.ಕೊಂಚ ಕಾಲ ಬಂದ ಕಳೆ:
ಶನಿವಾರ ಮಧ್ಯಾಹ್ನ ನಾಲ್ಕು ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಧಾನಸೌಧದಲ್ಲಿ ಕರೆದಿದ್ದ ಕಾರಣ ಶಾಸಕರು ಅವರ ಬೆಂಬಲಿಗರ ಓಡಾಟದಿಂದ ಕೊಂಚ ಕಳೆ ಬಂದಿತ್ತು. ಬೆಳಗ್ಗೆಯಿಂದಲೇ ಅಧಿಕಾರಿಗಳು, ಸಿಬ್ಬಂದಿ ಓಡಾಟ ಹೆಚ್ಚಾಗಿತ್ತು. ಬೆಳಗ್ಗೆಯಿಂದಲೇ ಪೊಲೀಸರು ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ್ದರು. ವಿಧಾನಸೌಧದಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಪ್ರವೇಶಕ್ಕೆ ನಿರ್ಬಂಧಿಸಿದ್ದರು.ಶಾಸಕಾಂಗ ಸಭೆಗೆ ಬರುವ ಶಾಸಕರ ವಾಹನಗಳನ್ನು ಹೊರತುಪಡಿಸಿ ಬೆಂಬಲಿಗರ ವಾಹನಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಹೀಗಿದ್ದರೂ ವಿಧಾನಸೌಧ ಆವರಣ ವಾಹನಗಳಿಂದ ತುಂಬಿತ್ತು. ಕೆಲ ಶಾಸಕರ ವಾಹನ ನಿಲುಗಡೆಗೆ ಪರದಾಡುತ್ತಿರುವುದು ಕಂಡು ಬಂತು.
ಇನ್ನೂ ಎರಡ್ಮೂರು ದಿನಗಳ ಕಾಲ ವಿಧಾನಸೌಧ ಕಳೆಗುಂದಿದ ಸ್ಥಿತಿಯಲ್ಲಿ ಇರಲಿದ್ದು, ಬುಧವಾರದಿಂದ ವಿಧಾನಸೌಧಕ್ಕೆ ಹೊಸ ಕಳೆ ಬರಲಿದೆ.