ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕುಲ್ಕುಂದ ಶಿವರಾಯರು (ನಿರಂಜನ) ವೈಯುಕ್ತಿಕವಾಗಿ ಭಾವಜೀವಿ. ಆದರೆ ಅವರ ಒಟ್ಟು ಸಾಹಿತ್ಯದಲ್ಲಿ ಜಮೀನ್ದಾರರು, ಪ್ರಭುತ್ವ, ವಸಾಹತುಗಳ ವಿರುದ್ಧ ಧ್ವನಿ ಎತ್ತಿರುವುದು ಗಮನಾರ್ಹ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶನಿವಾರ ತುಳು ಭವನದಲ್ಲಿ ಹಮ್ಮಿಕೊಂಡ ಸಾಹಿತಿ ನಿರಂಜನ 100 ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಗತಿಶೀಲ ಸಾಹಿತ್ಯ ಪ್ರಕಾರದಲ್ಲಿ ಚದುರಂಗ ಹಾಗೂ ನಿರಂಜನರು ಗಟ್ಟಿಯಾಗಿ ನೆಲೆವೂರಿದ್ದಾರೆ. 62 ಸೃಜನಶೀಲ ಹಾಗೂ 20 ಸಂಪಾದಿತ ಸೇರಿದಂತೆ ಒಟ್ಟು 82 ಕೃತಿಗಳನ್ನು ನಿರಂಜನರು ರಚಿಸಿದ್ದಾರೆ. ಕಮ್ಯೂನಿಸ್ಟ್‌ವಾದಿಯಾಗಿದ್ದ ಶಿವರಾಯರು ಏಳೆಂಟು ಹೆಸರುಗಳನ್ನು ಇಟ್ಟುಕೊಂಡಿದ್ದರು. ಸಾಹಿತ್ಯ ಲೋಕದಲ್ಲಿ ನಿರಂಜನರಾಗಿ ಬೆಳಗಿದ್ದಾರೆ. ಅವರ ಹುಟ್ಟೂರು ಸುಬ್ರಹ್ಮಣ್ಯದ ಸಮೀಪದ ಕುಲ್ಕುಂದದಲ್ಲಿ ಅವರ ಯಾವುದೇ ಕುರುಹುಗಳು ಇಲ್ಲದೇ ಇರುವುದು ವಿಪರ್ಯಾಸ ಎಂದರು.ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅಧ್ಯಕ್ಷತೆ ವಹಿಸಿ, ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ನಿರಂಜನರ ಬದುಕು-ಬರಹವನ್ನು ಪರಿಚಯಿಸುವ ಉದ್ದೇಶದಿಂದ ನಿರಂಜನ 100 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರಂಜನರ ಸಾಹಿತ್ಯ ಮರೆಯಾಗಿದೆ. ಅವುಗಳನ್ನು ಹುಡುಕಿ ಪುನರ್ ಮುದ್ರಣ ಮಾಡುವ ಪ್ರಯತ್ನ ಮಾಡಬೇಕಾಗಿದೆ ಎಂದರು.ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಇದ್ದರು.ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಪೂರ್ಣಿಮಾ ವಂದಿಸಿದರು. ಸದಸ್ಯೆ ಅಕ್ಷತಾ ನಿರೂಪಿಸಿದರು.ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕನ್ನಡ ವಿಭಾಗ ಮತ್ತು ರಂಗ ಅಧ್ಯಯನ ಕೇಂದ್ರ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ,ಜರ್ನಿ ಥೇಟರ್ ಗ್ರೂಪ್ ಮಂಗಳೂರು ಸಹಕಾರ ನೀಡಿದ್ದವು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ನಿರಂಜನರ ಸಾಹಿತ್ಯಕ್ಕೆ ಸಂಬಂಧಿಸಿ ವಿವಿಧ ಗೋಷ್ಠಿಗಳು ನಡೆದು ಸಂಜೆ ಅವರ ಕಾದಂಬರಿ ಮೃತ್ಯುಂಜಯದ ರಂಗರೂಪ ‘ಮರಣ ಗೆಂದಿನಾಯೆ’ ನಾಟಕ ಮಣಿಪಾಲದ ಸಂಗಮ ನಾಟಕ ಕಲಾವಿದರಿಂದ ಪ್ರದರ್ಶನಗೊಂಡಿತು.