ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲೇ ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಆರೋಗ್ಯ, ಶಿಕ್ಷಣ, ಮನೋರಂಜನೆಯ ಸಕಾರಾತ್ಮಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಿ, ಪೂರ್ಣ ವ್ಯಕ್ತಿತ್ವ ರೂಪಿಸುವ ಉದ್ದೇಶದಿಂದ ಬಾಲಭವನವನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಿನಿ ರೈಲು, ಫ್ಯಾಂಟಸಿ ಪಾರ್ಕ್, ವಿಜ್ಞಾನ ಉದ್ಯಾನ, ಥಿಯೇಟರ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿರುವ ಬೆಂಗಳೂರು ಮಾದರಿಯ ಸುಸಜ್ಜಿತ ಬಾಲಭವನ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ್ ಬಾಲಭವನ ಸೊಸೈಟಿ ಬೆಂಗಳೂರು, ನಿರ್ಮಿತಿ ಕೇಂದ್ರ ಹಾಗೂ ಬಾಲ ಭವನ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಾಧವನಗರದ ಎನ್‌ಸಿಸಿ ಕಚೇರಿಯ ಹಿಂಭಾಗದಲ್ಲಿ ನಡೆದ ಜಿಲ್ಲಾ ಬಾಲಭವನ ಭೂಮಿ ಪೂಜಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲ ಭವನ ನಿಯೋಜಿತ ಜಾಗದ ಇಂದಿನ ಮೌಲ್ಯ ಸುಮಾರು ₹100 ಕೋಟಿ ಬೆಲೆ ಬಾಳುತ್ತದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಆಸ್ತಿ ಬಾಲಭವನ ನಿರ್ಮಾಣಕ್ಕೆ ನಮಗೆ ಸಿಕ್ಕಿದ್ದು ಸಂತಸ ತಂದಿದೆ. ಅಂದಾಜು 3 ಎಕರೆ ಜಾಗದಲ್ಲಿ ₹ 20 ಕೋಟಿ ಅನುದಾನದಲ್ಲಿ ಬಾಲಭವನ ನಿರ್ಮಾಣವಾಗಲಿದೆ. ಈಗಾಗಲೇ ₹2 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ವಂತ ಜಿಲ್ಲಾ ಕಟ್ಟಡವಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಸ್ವಂತ ಕಟ್ಟಡ ನಿಯೋಜಿತ ಜಾಗದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಒಟ್ಟು ₹6 ಕೋಟಿ ಅನುದಾನದಲ್ಲಿ ಜಿಲ್ಲಾ ಕಚೇರಿ ನಿರ್ಮಾಣಕ್ಕೆ ಈಗಾಗಲೇ ₹4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.ಈ ವರ್ಷ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಅಂಗನವಾಡಿ ನಿರ್ಮಿಸಲಾಗುವುದು. ಜತೆಗೆ ಮೇಲ್ದರ್ಜೆಗೇರಿಸುವ ಅಂಗನವಾಡಿಗಳನ್ನು ಸಹ ಪಟ್ಟಿ ಮಾಡಲಾಗಿದೆ. ಈ ವರ್ಷ ಹೆಚ್ಚು ಮಳೆಯಾಗಿರುವ ಕಾರಣ 200 ಅಂಗನವಾಡಿಗಳಿಗೆ ತಲಾ ₹1 ಲಕ್ಷ ಹಣವನ್ನು ದುರಸ್ತಿಗೆ ನೀಡಲಾಗಿದೆ . ಅದೇ ರೀತಿ ಸುಮಾರು ಸವದತ್ತಿಯಲ್ಲಿ ₹10 ಕೋಟಿ ಅನುದಾನದಲ್ಲಿ ಅತಿಥಿ ಗೃಹ, ವಾಣಿಜ್ಯ ಮಳಿಗೆ ಉದ್ಘಾಟಿಸಲಾಗಿದೆ ಎಂದು ವಿವರಿಸಿದರು.ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಮಾತನಾಡಿ, ಮಕ್ಕಳ ಆಟ, ಕ್ರೀಡೆ, ಮನೋರಂಜನೆ ಉತ್ತಮ ಹವ್ಯಾಸಕ್ಕೆ ನಗರಕ್ಕೆ ಅಗತ್ಯವಿರುವ ಬಾಲಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಷಯ. ಮಕ್ಕಳಿಗೆ ಮನೋರಂಜನೆ ಹಾಗೂ ಮನೋವಿಕಾಸಕ್ಕೆ ಬಾಲ ಭವನ ಅತ್ಯಗತ್ಯವಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನ ವೃದ್ಧಿಗೆ ಅಗತ್ಯವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಂತ ಪಠ್ಯೇತರ ಚಟುವಟಿಕೆ ತರಬೇತಿ ನೀಡುವುದು. ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನದ ಮುಖ್ಯ ಧ್ಯೇಯ ಎಂದರು.ರಾಜ್ಯ ಬಾಲಭವನ ಅಧ್ಯಕ್ಷ ನಾಯ್ಡು, ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸಿದ್ದೇಶ್ವರ ಎನ್. ಬೆಂಗಳೂರು ಜವಾಹರ ಬಾಲಭವನ ಕಾರ್ಯದರ್ಶಿ ಬಿ.ಎಚ್.ನಿಶ್ಚಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಾದ ಶೇಖರಗೌಡ ಕುರಡಗಿ, ನಗರ ಸೇವಕ ಸಂದೀಪ ಜೀರಗ್ಯಾಳ ಪಾಲ್ಗೊಂಡಿದ್ದರು.ಬಾಲಭವನ ನಿರ್ಮಾಣ: ಭೂಮಿಪೂಜೆ: ಕಾರ್ಯಕ್ರಮದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿ ಉತ್ತರ ವಿಧಾನಸಭಾ ಶಾಸಕ ಆಸೀಫ್ (ರಾಜು) ಸೇಠ ಅವರು ಬಾಲ ಭವನ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದರು. ಬೆಂಗಳೂರು ನಂತರ ಬೆಳಗಾವಿಯಲ್ಲಿ ದೊಡ್ಡ ಮಟ್ಟದಲ್ಲಿ ಬಾಲ ಭವನ ನಿರ್ಮಾಣ ಆಗುತ್ತಿದೆ. ಸದ್ಯಕ್ಕೆ ಬಾಲ ಭವನ ನಿರ್ಮಾಣಕ್ಕೆ ₹20 ಕೋಟಿ ಅನುದಾನ ಮೀಸಲಿದೆ. ಅನುದಾನದ ಯಾವುದೇ ಕೊರತೆಯಿಲ್ಲ. ಒಂದು ವೇಳೆ ಅನುದಾನದ ಕೊರತೆಯಾದಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಅತೀ ಸುಂದರ ಮಾದರಿಯ ಬಾಲಭವನ ನಿರ್ಮಾಣಕ್ಕೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಲಾಗುವುದು.
-ಲಕ್ಷ್ಮೀ ಹೆಬ್ಬಾಳಕರ, ಸಚಿವೆ.