ಅಡುಗೆ ಮನೆಯಿಂದ ಅಂತರಿಕ್ಷಕ್ಕೂ ಮಹಿಳೆ ಪ್ರವೇಶ

| Published : Apr 01 2024, 01:00 AM IST / Updated: Apr 01 2024, 09:17 AM IST

ಸಾರಾಂಶ

  ಹೆಣ್ಣುಮಕ್ಕಳು ಅಡುಗೆ ಮಾಡೋಕಷ್ಟೇ ಲಾಯಕ್ಕು ಅಂದರೆ ಹೇಗೆ? ಹೆಣ್ಣುಮಕ್ಕಳು ರಾಕೆಟ್ ಉಡಾವಣೆ ಮಾಡುತ್ತಾರೆ, ಆಕಾಶದಲ್ಲೂ ಹಾರಾಡುತ್ತಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ದಾವಣಗೆರೆಯಲ್ಲಿ ತೀಕ್ಷ್ಣವಾಗಿ ಉತ್ತರಿಸಿದರು.

 ದಾವಣಗೆರೆ : ನಮ್ಮನೆ, ನಿಮ್ಮನೆ, ಎಲ್ಲರ ಮನೆಯಲ್ಲೂ ಹೆಣ್ಣುಮಕ್ಕಳೇ ಅಡುಗೆ ಮಾಡುವುದು. ಹಾಗೆಂದು ಹೆಣ್ಣುಮಕ್ಕಳು ಅಡುಗೆ ಮಾಡೋಕಷ್ಟೇ ಲಾಯಕ್ಕು ಅಂದರೆ ಹೇಗೆ? ಹೆಣ್ಣುಮಕ್ಕಳು ರಾಕೆಟ್ ಉಡಾವಣೆ ಮಾಡುತ್ತಾರೆ, ಆಕಾಶದಲ್ಲೂ ಹಾರಾಡುತ್ತಾರೆ, ಐಎಎಸ್‌, ಐಪಿಎಸ್‌ ಅಧಿಕಾರಿಗಳೂ ಆಗುತ್ತಾರೆ. ನಮ್ಮ ದಾವಣಗೆರೆ ಎಸ್‌ಪಿ ಸಹ ಮಹಿಳೆ ಎನ್ನುವ ಮೂಲಕ ಕಾಂಗ್ರೆಸ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸಂಸದ ಜಿ.ಎಂ.ಸಿದ್ದೇಶ್ವರ ತೀಕ್ಷ್ಣವಾಗಿ ಉತ್ತರಿಸಿದರು.

ನಗರದಲ್ಲಿ ಭಾನುವಾರ ಹೈಸ್ಕೂಲ್ ಮೈದಾನ, ಇಂಡಿಯನ್ ಕಾಫಿ ಬಾರ್‌, ಪಿ.ಬಿ. ರಸ್ತೆಯ ಹೂವಿನ ಮಾರುಕಟ್ಟೆ, ಬಿಐಇಟಿ ರಸ್ತೆ, ವಸಂತ ಬೆಣ್ಣೆದೋಸೆ ಹೊಟೇಲ್ ಇತರೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಕೈಗೊಂಡ ವೇಳೆ ಮಾತನಾಡಿದ ಅವರು, ಹೆಣ್ಣುಮಕ್ಕಳು ಸಾಧನೆ ಮಾಡದ ಕ್ಷೇತ್ರ ಬಹುಶಃ ಯಾವುದೂ ಉಳಿದಿಲ್ಲ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯ ಹೆಜ್ಜೆ ಗುರುಗಳಿವೆ. ಹೆಣ್ಣುಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳೆಲ್ಲಾ ಜನರನ್ನು ಮರಳು ಮಾಡುವುದಕ್ಕಷ್ಟೇ ಸೀಮಿತವಾಗಿವೆ. ಮನೆಯಲ್ಲಿ ಗಂಡನಿಂದ ಹಣ ಕಿತ್ತು, ಹೆಂಡತಿಗೆ ಕೊಡುವ ಗ್ಯಾರಂಟಿ ಸ್ಕೀಂ. ಕಾಂಗ್ರೆಸ್‌ ಪಕ್ಷ ಕೇವಲ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು, ಮತ ಕೇಳುತ್ತಿದೆ. ಆದರೆ, ಬಿಜೆಪಿ ಅಭಿವೃದ್ಧಿ, ದೂರದೃಷ್ಟಿ, ದೇಶದ ಭದ್ರತೆ, ಸಬ್ ಕಾ ಸಾಥ್‌, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್‌ ಹೆಸರಿನಲ್ಲಿ ಚುನಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಮಾಡಬೇಕೆಂಬ ಸಂಕಲ್ಪ ನಮ್ಮದಷ್ಟೇ ಅಲ್ಲ, ಇಡೀ ದೇಶದ ಜನರದ್ದಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಭಾರೀ ಮತಗಳ ಅಂತರದಲ್ಲಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವ ಮೂಲಕ ಲೋಕಸಭೆಗೆ ಗೆಲ್ಲಿಸಿ, ಕಳಿಸಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರ ಮತದಾರರು ಸತತವಾಗಿ ಬಿಜೆಪಿಗೆ ಆಶೀರ್ವದಿಸಿಕೊಂಡು, ಬಂದಿದ್ದಾರೆ. ಈ ಸಲವೂ ನಿಮ್ಮೆಲ್ಲರ ಮತ, ಆಶೀರ್ವಾದ, ಹಾರೈಕೆ ಬಿಜೆಪಿ ಮೇಲಿರಲಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ, ಜಯಪ್ರಕಾಶ ಕೊಂಡಜ್ಜಿ, ಮುರುಗೇಶ ಆರಾಧ್ಯ, ಬಿ.ಎಂ. ಸತೀಶ ಕೊಳೇನಹಳ್ಳಿ, ಎಸ್.ಟಿ. ವೀರೇಶ, ಆರ್.ಎಲ್. ಶಿವಪ್ರಕಾಶ, ಶಿವನಗೌಡ ಪಾಟೀಲ್, ಶಂಕರಗೌಡ ಬಿರಾದಾರ್‌, ಟಿಂಕರ್ ಮಂಜಣ್ಣ, ಎಸ್.ಟಿ.ಹನುಮೇಗೌಡ, ಜಯಪ್ರಕಾಶ ಮಾಗಿ, ರಮೇಶ ನಾಯ್ಕ, ಗುರು, ಸೇರಿದಂತೆ ಅನೇಕರು ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಇದ್ದರು.