ಸಾರಾಂಶ
ಸೋಮಸಾಗರ, ಬಸರಿಹಾಳ ಅಂಗನವಾಡಿ ಕಟ್ಟಡಗಳಿಗೆ ಗ್ರಹಣ!
ಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿತಾಲೂಕಿನ ಬಸರಿಹಾಳ ಗ್ರಾಪಂ ವ್ಯಾಪ್ತಿಯ ಸೋಮಸಾಗರ ಗ್ರಾಮದ ೨ನೇ ಅಂಗನವಾಡಿ ಕಟ್ಟಡ ಕಾಮಗಾರಿಯು ಕಳೆದ ೮ ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
೨೦೧೬-೧೭ನೇ ಸಾಲಿನಲ್ಲಿ ನರೇಗಾ ಯೋಜನೆಯಿಂದ ₹೫ ಲಕ್ಷ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ₹೩ ಲಕ್ಷ ಸೇರಿ ಒಟ್ಟು ₹೮ ಲಕ್ಷ ಅನುದಾನ ಈ ಕಾಮಗಾರಿಗೆ ಬಿಡುಗಡೆಯಾಗಿತ್ತು. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ₹3 ಲಕ್ಷ ಅನುದಾನ ಬಳಸಿಕೊಂಡು ಕಾಮಗಾರಿ ಆರಂಭಿಸಿದ್ದರು. ಆನಂತರ ನರೇಗಾದ ಹಣ ಸಹ ಬಳಸಲಾಗಿತ್ತು. ಸಮಯಕ್ಕೆ ಸರಿಯಾಗಿ ಕಾಮಗಾರಿ ಮಾಡದೆ ಇರುವುದರಿಂದ ನರೇಗಾ ಅನುದಾನ ಬಿಡುಗಡೆಯಾಗಲು ತಾಂತ್ರಿಕ ಸಮಸ್ಯೆ ಅಡ್ಡಿಯಾಯಿತು. ಹೀಗಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ.೨೦೧೯ರಲ್ಲೆ ಉದ್ಘಾಟನೆಯಾಗಿದ್ದ ಈ ಕಟ್ಟಡ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಬಾಕಿ ಕಾಮಗಾರಿಗೆ ಅಥವಾ ಹೊಸ ಕಟ್ಟಡಕ್ಕೆ ಯಾವ ಅನುದಾನ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೀತಿಯ ಬಾಕಿ ಉಳಿದ ಕಾಮಗಾರಿಗಳಿಗೆ ಜಿಪಂ-ತಾಪಂ ಅಥವಾ ಗ್ರಾಪಂ ಅನುದಾನದಿಂದ ಅಭಿವೃದ್ಧಿಪಡಿಸಲು ಅವಕಾಶವಿದೆ. ಆದರೆ, ಎಂಟು ವರ್ಷಗಳಾದರೂ ಕಾಮಗಾರಿಗೆ ಗ್ರಹಣ ಹಿಡಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ಗ್ರಾಮದ ಮಹಿಳಾ ಸಂಘದ ಕಚೇರಿಯಲ್ಲಿಯೇ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ದಿನ ನಿತ್ಯ ೨೫ರಿಂದ ೩೦ ಮಕ್ಕಳು ಕೇಂದ್ರಕ್ಕೆ ಬರುತ್ತಾರೆ. ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದು, ಸಮಸ್ಯೆ ಸರಪಡಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವರು ಗ್ರಾಮಕ್ಕೆ ಬಂದು ಹೋಗಿ ೨ ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಜಿಪಂ ಸಿಇಒ ಅವರು ಎಚ್ಚೆತ್ತು ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.ಬಸರಿಹಾಳದಲ್ಲಿಯೂ ಇದೇ ಸಮಸ್ಯೆ:
ಹೊಸ ಗ್ರಾಪಂ ಆಗಿ ಮೇಲ್ದರ್ಜೆಗೇರಿಸಲು ತಾಲೂಕಿನ ಬಸರಿಹಾಳ ಗ್ರಾಮದಲ್ಲಿಯೂ ಇದೇ ಸಮಸ್ಯೆಯಾಗಿ ಅಂಗನವಾಡಿ ಕಟ್ಟಡವೊಂದು ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರರು ಕಾಮಗಾರಿಯ ಹಣ ಪಡೆದರೂ ಕಾಮಗಾರಿ ನಡೆಸಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಕಾಮಗಾರಿಯ ಮಾಹಿತಿ ಇಲ್ಲ ಎಂದು ಪಿಡಿಒ ಬಸವರಾಜ ಸಂಕನಾಳ ಹೇಳುತ್ತಿದ್ದಾರೆ.ಸೋಮಸಾಗರ, ಬಸರಿಹಾಳ ಅಂಗನವಾಡಿ ಕಟ್ಟಡಗಳು ಅಪೂರ್ಣಗೊಂಡಿದ್ದು, ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸುವ ಕುರಿತು ಜಿಪಂ ಹಾಗೂ ತಾಪಂ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕನಕಗಿರಿ ಸಿಡಿಪಿಒ ವಿರೂಪಾಕ್ಷ ಹೇಳಿದ್ದಾರೆ.
ಸೋಮಸಾಗರ ಹಾಗೂ ಬಸರಿಹಾಳ ಗ್ರಾಮದಲ್ಲಿನ ಬಾಕಿ ಉಳಿದ ಅಂಗನವಾಡಿ ಕಟ್ಟಡ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಟಿ. ರಾಜಶೇಖರ ತಿಳಿಸಿದ್ದಾರೆ.