ಬ್ಯಾಡಗಿ ತಹಸೀಲ್ದಾರ್ ಕಚೇರಿ ಕಾರ್ಯವೈಖರಿ ಪರಿಶೀಲಿಸಿದ ಡಿಸಿ

| Published : Jul 29 2024, 12:46 AM IST

ಸಾರಾಂಶ

ಬ್ಯಾಡಗಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಬ್ಯಾಡಗಿ:ಪಟ್ಟಣದ ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.ಹಾವೇರಿಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಮೊದರ ಬಾರಿಗೆ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಆಗಮಿಸಿದ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಕಾರ್ಯ ವೈಖರಿಯನ್ನ ಪರಿಶೀಲನೆ ನಡೆಸಿದರು.ಸಾರ್ವಜನಿಕರ ಕುಂದು ಕೊರತೆ ಆಲಿಕೆ: ಜಿಲ್ಲಾಧಿಕಾರಿಗಳು ಬಂದ ಸಂದರ್ಭದಲ್ಲಿ ತಮ್ಮ ತಮ್ಮ ಕೆಲಸಕ್ಕಾಗಿ ಆಗಮಿಸಿದ್ದ ಜನರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಂಡರು, ಎಲ್ಲ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿಗಳು, ಅಲ್ಲಿದ್ದ ತಹಸೀಲ್ದಾರ್‌ ಫಿರೋಜಷಾ ಸೋಮನಕಟ್ಟಿ ಹಾಗೂ ಸಿಬ್ಬಂದಿಗಳಿಗೆ ಜನರನ್ನ ಕಚೇರಿಗಳಿಗೆ ಅಲೆದಾಡಿಸದೇ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರಲ್ಲದೇ ಕೆಲಸ ವಿಳಂಬವಾಗಲು ಕಾರಣವೇನು ಎಂಬುದನ್ನ ಮೊದಲು ತಿಳಿಸಿ ಎಂದರು. ನಂತರ ಅಲ್ಲೇ ಇದ್ದ ಕೆಲ ರೈತರು ಬೆಳೆ ವಿಮೆ ಬಿಡುಗಡೆ ವಿಳಂಬ ಕುರಿತಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಳಿಗೆ ಮನವಿ ಮಾಡಿದರು.ನಂತರ ತಹಸೀಲ್ದಾರ್ ಕಚೇರಿಯಲ್ಲಿನ ಭೂ ಮಾಪನ ಇಲಾಖೆಗೆ ತೆರಳಿ ಅಲ್ಲಿನ ಸಿಬ್ಬಂದಿಗಳ ಕಾರ‍್ಯವೈಖರಿ ಪರಿಶೀಲನೆ ನಡೆಸಿ ಬಾಕಿ ಉಳಿದಿರುವ ಕಡತಗಳ ವಿಲೇವಾರಿ ಕುರಿತಂತೆ ಮಾಹಿತಿ ಪಡೆದರು. ಅಲ್ಲಿಂದ ದಾಖಲೆಗಳ ಗಣಕೀಕೃತ ಮಾಡುವ ಕೋಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು ಮತ್ತು ಶೀಘ್ರದಲ್ಲಿ ಎಲ್ಲ ಕೆಲಸ ಪೂರ್ಣಗೊಳಿಸಿ ಎಂದು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿ ದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಚೆನ್ನಪ್ಪ ಎಚ್.ಬಿ, ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೋಳೆಪ್ಪಗೋಳ, ಸೇರಿದಂತೆ ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.