ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಅವಿಶ್ವಾಸ ನಿರ್ಣಯದಲ್ಲಿ ತಾಂತ್ರಿಕವಾಗಿ ಜಯಗಳಿಸಿದ್ದರೂ ನೈತಿಕವಾಗಿ ಸೋತಿದ್ದಾರೆ ಎಂದು 9 ಜನ ನಿರ್ದೇಶಕರು ಹೇಳಿದರು.ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಎಲ್.ಮೋಹನ್ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಿನ್ನಮತೀಯ ನಿರ್ದೇಶಕರು, ಸಂಘದ 14 ಜನ ಸದಸ್ಯರಲ್ಲಿ 9 ಜನ ಸದಸ್ಯರು ಬಿ.ಎಲ್. ದೇವರಾಜು ಅವರಿಗೆ ವಿರುದ್ಧವಾಗಿದ್ದು ಸಾಮಾನ್ಯ ಸಭೆಗಳನ್ನು ನಡೆಸಲು ಅಗತ್ಯವಾದ ಕೋರಂ ಅಧ್ಯಕ್ಷರಿಗಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು. ಸಂಸ್ಥೆಯ 14 ಮಂದಿ ನಿರ್ದೇಶಕರಲ್ಲಿ 10 ಮಂದಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮತ ಹಾಕಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಹಿ ಹಾಕಿದ್ದೆವು. ಅಧ್ಯಕ್ಷ ಬಿ.ಎಲ್.ದೇವರಾಜು ಪರ 4 ಜನ ಮಾತ್ರ ನಿರ್ದೇಶಕ ಇದ್ದರು. ಶನಿವಾರ ನಡೆದ ಅವಿಶ್ವಾಸ ಮತದಾನದ ದಿನ ನಮ್ಮಲ್ಲಿನ ಓರ್ವ ನಿರ್ದೇಶಕರನ್ನು ಆಮಿಷ ಒಡ್ಡಿ ತಮ್ಮ ಕಡೆ ಸೆಳೆದುಕೊಂಡು ಬಿ.ಎಲ್. ದೇವರಾಜು ತಾಂತ್ರಿಕವಾಗಿ ಅವಿಶ್ವಾಸವನ್ನು ಗೆದ್ದಿದ್ದಾರೆ ಎಂದು ಆರೋಪಿಸಿದರು.
ಅಧ್ಯಕ್ಷ ಬಿ.ಎಲ್.ದೇವರಾಜು ಸೇರಿ 14 ಜನ ನಿರ್ದೇಶಕರೂ ಜೆಡಿಎಸ್ ಪಕ್ಷದ ಮೂಲಕ ಚುನಾಯಿತರಾದವರು. ಬಿ.ಎಲ್.ದೇವರಾಜು ಜೆಡಿಎಸ್‌ನಲ್ಲಿದ್ದಾಗ ಚುನಾವಣೆಯಲ್ಲಿ ಜಯಗಳಿಸಿ ನಾವೆಲ್ಲರೂ ಒಪ್ಪಿಗೆಯಿಂದ ಸಂಸ್ಥೆ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದವು. ಒಡಂಬಡಿಕೆ ಮೂಲಕ 30 ತಿಂಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಜಿಗಿದು ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರು ಎಂದರು.ಒಡಂಬಡಿಕೆಯಂತೆ ಯುವಕರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡೆವು. ಅದರೆ, ಇದಕ್ಕೆ ಸೊಪ್ಪು ಹಾಕಲಿಲ್ಲ. ಸಂಸ್ಥೆಯಲ್ಲಿ ನಡೆದ ಸಭೆಗಳಲ್ಲಿ ಕೋರಂ ಇಲ್ಲದಿದ್ದರೂ ಸಭೆ ನಡೆಸಿದರು ಎಂದು ಆರೋಪಿಸಿದರು.
ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ಮಾತನಾಡಿ, ಸಹಕಾರ ಸಂಘಗಳಲ್ಲಿ ರಾಜಕಾರಣ ಬೆರೆಸಿದರೆ ಸಂಘ-ಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಿದ್ದೇವೆ. ಒಳ ಒಪ್ಪಂದದ ನಿಯಮಗಳನ್ನು ಪಾಲಿಸಿ ಬಿ.ಎಲ್.ದೇವರಾಜು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಇತರರಿಗೆ ಅವಕಾಶ ಮಾಡಬಹುದಿತ್ತು ಎಂದರು.ಅಧ್ಯಕ್ಷರು ಅನೈತಿಕ ರಾಜಕಾರಣಕ್ಕೆ ಮಾದರಿಯಾಗಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಬಿ.ಎಲ್.ದೇವರಾಜು ಸಂಘದ ಹಿತದೃಷ್ಟಿಯಿಂದ ರಾಜೀನಾಮೆ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಸೋಮನಹಳ್ಳಿ ಮೋಹನ್, ನಿರ್ದೇಶಕರಾದ ಸೊಳ್ಳೇಪುರ ಮಂಜೇಗೌಡ, ತೆರ್ನೇನಹಳ್ಳಿ ಬಲದೇವ್, ಎಸ್.ಆರ್.ನವೀನ್ ಕುಮಾರ್, ರುಕ್ಮಿಣಿ ರಾಮಕೃಷ್ಣಗೌಡ, ಕೊರಟೀಕೆರೆ ದಿನೇಶ್, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್ ಇದ್ದರು.