ಪ್ರಶಸ್ತಿಗೆ ಯೋಗ್ಯ ವ್ಯಕ್ತಿ ಆಯ್ಕೆ ನಡೆಯಬೇಕು: ಪಂಡಿತಾರಾಧ್ಯ ಸ್ವಾಮೀಜಿ

| Published : Feb 08 2024, 01:31 AM IST

ಪ್ರಶಸ್ತಿಗೆ ಯೋಗ್ಯ ವ್ಯಕ್ತಿ ಆಯ್ಕೆ ನಡೆಯಬೇಕು: ಪಂಡಿತಾರಾಧ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಶಸ್ತಿಯನ್ನು ಗೌರವದಿಂದ ಸ್ವೀಕಾರ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಬೇಕು. ಆದ್ದರಿಂದ ಪ್ರಶಸ್ತಿಗೆ ಯೋಗ್ಯ ವ್ಯಕ್ತಿಯ ಆಯ್ಕೆ ಮಾಡಬೇಕು ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪ್ರಶಸ್ತಿಯನ್ನು ಗೌರವದಿಂದ ಸ್ವೀಕಾರ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಬೇಕು. ಆದ್ದರಿಂದ ಪ್ರಶಸ್ತಿಗೆ ಯೋಗ್ಯ ವ್ಯಕ್ತಿಯ ಆಯ್ಕೆ ಮಾಡಬೇಕು ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ಧಾರವಾಡದ ಮಜ್ಜಿಗೆ ಪಂಚಪ್ಪ ಸಮುದಾಯ ಸಭಾಭವನದಲ್ಲಿ ಬಸವ ಅಂತಾರಾಷ್ಟ್ರೀಯ ಲಂಡನ್ ಪ್ರತಿಷ್ಠಾನದಿಂದ ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರಶಸ್ತಿ ಕೊಡುವವರಿಗೂ, ಪಡೆದುಕೊಳ್ಳುವವರಿಗೂ ಅರ್ಹತೆಗಳಿರಬೇಕು. ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಾಗಿ ಒತ್ತಡಗಳು ಹೆಚ್ಚಿ ಹಣ ಕೊಟ್ಟು ಪಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಪ್ರಶಸ್ತಿಗಳು ಕೆಲವರನ್ನು ಪುರಸ್ಕರಿಸಿದರೆ ಗೌರವ ಹೆಚ್ಚಿಸಿಕೊಳ್ಳುತ್ತದೆ. ಇನ್ನು ಕೆಲವರನ್ನು ಪುರಸ್ಕರಿಸಿದರೆ ಅದರ ಮೌಲ್ಯ ಕಳೆದುಕೊಳ್ಳುತ್ತದೆ. ಆದ್ದರಿಂದ ಪ್ರಶಸ್ತಿ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುವ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಮಾತ್ರ ಅದರ ಮೌಲ್ಯ ಹೆಚ್ಚುವುದು ಎಂದು ಹೇಳಿದರು.

ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿ ಬಸವಣ್ಣನವರನ್ನು ಗೃಹಸ್ಥ ಜಗದ್ಗುರು ಎಂದು ಕರೆಯುತ್ತಿದ್ದರು. ಬಸವಣ್ಣನವರ ತತ್ವಗಳನ್ನು ಉಸಿರಾಗಿಸಿಕೊಂಡು ನಡೆ-ನುಡಿಗಳನ್ನು ಬದುಕಿನುದ್ದಕ್ಕೂ ಸಿದ್ಧಾಂತಗಳನ್ನಾಗಿ ಮಾಡಿಕೊಂಡರು. ಜೀವನಕ್ಕೆ ಬದ್ಧತೆಯ ಜತೆಗೆ ಆದರ್ಶ ಇರಬೇಕು. ಆಗ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಹೇಳಿದರು.

ಸನಾತನವಾದಿಗಳು ಪುರಾತನರ ತತ್ವಗಳನ್ನು ಹೇಳುವವರಿಗೆ ಇಂದಿಗೂ ಕಿರುಕುಳ ಕೊಡುತ್ತ ಬಂದಿದ್ದಾರೆ. ವ್ಯಕ್ತಿಗೆ ಸಾವಿರಬಹುದು. ಆದರೆ ತತ್ವಗಳಿಗೆ, ಚಿಂತನೆಗಳಿಗೆ ಸಾವಿಲ್ಲ. ಕಲಬುರ್ಗಿಯವರು ದೈಹಿಕವಾಗಿ ಇಲ್ಲದೇ ಇರಬಹುದು, ಆದರೆ ಅವರ ತತ್ವ ಮತ್ತು ಚಿಂತನೆಗಳಿಗೆ ಎಂದೂ ಸಾವಿಲ್ಲ ಎಂದರು.

ಗದಗಿನ ತೋಟದಾರ್ಯ ಮಠದ ಸಿದ್ಧರಾಮ ಮಹಾಸ್ವಾಮಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಪ್ರಗತಿಪರ ಚಿಂತನೆಗೆ ಹೆಸರಾದವರು. ಈ ಪ್ರಶಸ್ತಿ ಶ್ರೀಗಳಿಗೆ ಕೊಟ್ಟು ಪ್ರಶಸ್ತಿಗೆ ನ್ಯಾಯವನ್ನು ಒದಗಿಸಿದ್ದಾರೆ. ಕಲಬುರ್ಗಿಯವರು ದೈಹಿಕವಾಗಿ ಇಲ್ಲದಿದ್ದರೂ ಅವರ ಚಿಂತನೆಗಳು ಇನ್ನು ಉಳಿದಿವೆ. ಪ್ರಗತಿಪರ ಚಿಂತನೆಯನ್ನು ನಿರಂತರವಾಗಿ ಕೆಲಸ ಮಾಡಬೇಕಾಗಿದೆ. ಕಲಬುರ್ಗಿಯವರ ವಿಚಾರಧಾರೆಗಳನ್ನು ಸಮಾಜದಲ್ಲಿ ಬಿತ್ತುವ ಕೆಲಸ ಆಗಬೇಕು ಎಂದು ಹೇಳಿದರು.

ನಾಡೋಜ ಗೊ.ರು.ಚನ್ನಬಸಪ್ಪ ಮಾತನಾಡಿ, ಭಾರತದಂತಹ ರಾಷ್ಟ್ರದಲ್ಲಿ ಸಂಶೋಧನೆ ಮಾಡುವುದು ಅಷ್ಟು ಸುಲಭವಲ್ಲ. ಭಾರತೀಯ ಸಂಶೋಧಕ ಅನೇಕ ಯಜ್ಞಕುಂಡಗಳನ್ನು ದಾಟಬೇಕಾಗುತ್ತದೆ ಎಂದು ಕಲಬುರ್ಗಿಯವರು ಹೇಳುತ್ತಿದ್ದರು. ಪ್ರಶಸ್ತಿ ಎನ್ನುವುದು ಪ್ರತಿಷ್ಠೆ, ಗೌರವ, ಅನನ್ಯತೆ, ಮನ್ನಣೆಗೆ ಸಂದ ಗೌರವ ಎಂದರು.

ಶರಣ ಚಿಂತಕ ವೀರಣ್ಣ ರಾಜೂರು, ನಾಗರಾಜಮೂರ್ತಿ, ಎಸ್ ಮಹಾದೇವಯ್ಯ, ಸದಾಶಿವಪ್ಪ, ಪ್ರಾಚಾರ್ಯ ಶಶಿಧರ ತೋಡ್ಕರ್ ಇತರರಿದ್ದರು. ಆರಂಭದಲ್ಲಿ ಜಾನಪದ ಸಂಶೋಧನಾ ಕೇಂದ್ರದ ಮಹಿಳಾ ಘಟಕದವರು ವಚನ ಗೀತೆಗಳನ್ನು ಹಾಡಿದರು. ಗೀತ ಜಯಂತ್ ಸ್ವಾಗತಿಸಿದರು. ವೀರಣ್ಣ ನಿರೂಪಿಸಿದರು.