ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ರಾಷ್ಟ್ರೀಯ ಪಕ್ಷಗಳಲ್ಲಿಯ ಹೊಯ್ದಾಟ, ತೊಳಲಾಟ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಆಪರೇಶನ್ ಮೂಲಕ ಅಧಿಕಾರ ಹಿಡಿದಿರುವುದು ಸೇರಿದಂತೆ ಹಲವು ವಿಶೇಷತೆಗಳು 2024 ಒಡಲೊಳಗೆ ದಾಖಲಾಗಿವೆ.ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಬಾಗಲಕೋಟೆ ಲೋಕಸಭಾ ವ್ಯಾಪ್ತಿಗೆ ಸೇರಿರುವ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷೆಯಂತೆ ಗೆಲುವು ಸಾಧಿಸಿತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಲೋಕಸಭೆಯಲ್ಲಿ ಸೋಲಿನ ರುಚಿ ನೋಡಬೇಕಾಯಿತು.
ಕಳೆದ ಸಾಲಿನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದ ರಾಮಕೃಷ್ಣ ದೊಡ್ಡಮನಿ ಲೋಕಸಭಾ ಚುನಾವಣೆಯ ವೇಳೆಗೆ ಮರಳಿ ಕಾಂಗ್ರೆಸ್ ಸೇರ್ಪಡೆಯಾದರು. ನರೇಗಲ್ಲ ಪಪಂ ಚುನಾವಣೆಯಲ್ಲಿ ಬಿಜೆಪಿಗೆ ಸ್ವಪಕ್ಷೀಯರಿಂದಲೇ ದ್ರೋಹ ಎದುರಾಯಿತು. ಮುಂಡರಗಿ ಪಪಂನಲ್ಲಿ ಬಿಜೆಪಿ ಸದಸ್ಯರೇ ಬಂಡಾಯ ಅಭ್ಯರ್ಥಿಯನ್ನು ಬೆಂಬಲಿಸುವ ಜತೆಗೆ ಕಾಂಗ್ರೆಸ್ ಸದಸ್ಯರು ಕೂಡಾ ಬಿಜೆಪಿ ಬಂಡಾಯ ಅಭ್ಯರ್ಥಿಯನ್ನು ಬೆಂಬಲಿಸಿದ್ದು ಗಮನಾರ್ಹವಾಗಿತ್ತು. ರಾಜ್ಯದಲ್ಲಿಯೇ ಅತೀ ಹೆಚ್ಚು ಆಸ್ತಿ ಹೊಂದಿರುವ ಗದಗ ಬೆಟಗೇರಿ ನಗರಸಭೆ ಅಮೂಲ್ಯ ಆಸ್ತಿಯಾದ ವಕಾರು ಸಾಲುಗಳ ತೆರವು ನಡೆದು ನಾಲ್ಕೈದು ವರ್ಷಗಳೇ ಗತಿಸಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಅದು ರಾಜಕೀಯ ತಿರುವ ಪಡೆದುಕೊಂಡು ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಯಿತು. ಅದೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ವಿರುದ್ಧ ಕೊರ್ಟ್ ಮೆಟ್ಟಿಲೇರಿದ್ದು, ಚುನಾಯಿತ ಆಡಳಿತ ಮಂಡಳಿ ಅಧಿಕಾರದಲ್ಲಿದ್ದರೂ ಅಧಿಕಾರಿಗಳಿಂದಲೇ ಆಡಳಿತ ನಡೆಸುವ ಅನಿವಾರ್ಯತೆ ಸೃಷ್ಟಿಯಾದ ವರ್ಷ ಇದಾಯಿತು.ಲೋಕಸಭಾ ಚುನಾವಣೆ: ಹಾವೇರಿ-ಗದಗ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಗಮನ ಸೆಳೆದಿತ್ತು. ಬಹಳ ವರ್ಷಗಳ ನಂತರ ಕಾಂಗ್ರೆಸ್ ಕೂಡಾ ವೀರಶೈವ ಲಿಂಗಾಯತ ಸಮುದಾಯದವವರಿಗೆ ಟಿಕೆಟ್ ನೀಡಿದ್ದು ವಿಶೇಷ. ಜಾತಿವಾರು ಸಮೀಕ್ಷೆ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಈ ಬಾರಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್ ನೀಡಿತ್ತು. ಆನಂದಸ್ವಾಮಿ ಅತೀ ಕಡಿಮೆ ಮತಗಳ ಅಂತರ (30 ಸಾವಿರ) ದಿಂದ ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋತರು. ಲೋಕಸಭಾ ಕ್ಷೇತ್ರ ವಿಂಗಡಣೆ ನಂತರ ಬಿಜೆಪಿಯ ಭದ್ರಕೋಟೆಯಂತಿದ್ದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ತತ್ತರಿಸಿ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿತು.
ಸ್ಥಳೀಯ ರಾಜಕೀಯ: ಜಿಲ್ಲೆಯ ಪುರಸಭೆ, ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸ್ಥಳೀಯ ಸಂಸ್ಥೆಯ ಬಿಜೆಪಿ ಸದಸ್ಯರಲ್ಲಿ ಒಗ್ಗಟ್ಟು ಮೂಡದ ಪರಿಣಾಮ ಕಾಂಗ್ರೆಸ್ ಇದರ ಲಾಭ ಪಡೆದುಕೊಂಡು ಬಿಜೆಪಿಯಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಬಂಡಾಯವೆದ್ದ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತ ಇದ್ದರೂ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಲು ನರೇಗಲ್ಲ ಪಪಂನಲ್ಲಿ ಬಿಜೆಪಿಗೆ ಸಾಧ್ಯವಾಗಲಿಲ್ಲ.ಮುಂಡರಗಿ ಪುರಸಭೆಯಲ್ಲಿ 15 ಬಿಜೆಪಿ ಸದಸ್ಯರಿದ್ದರೂ ಒಗ್ಗಟ್ಟಿರಲಿಲ್ಲ. ಚುನಾವಣಾ ಪೂರ್ವದಲ್ಲಿ 7 ಜನ ಬಂಡಾಯ ಬಿಜೆಪಿ ಸದಸ್ಯರು ಮುಂಡರಗಿ ಪಟ್ಟಣದಿಂದ ಹೈಜಾಕ್ ಆಗಿ, ಮತದಾನದ ದಿನ ಪ್ರತ್ಯಕ್ಷರಾದರು. ಬಿಜೆಪಿಯಿಂದ ಜ್ಯೋತಿ ಹಾನಗಲ್ ಅಭ್ಯರ್ಥಿ ಆಗಿದ್ದರು. ಆದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿರ್ಮಲಾ ಕೊರ್ಲಹಳ್ಳಿ ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾದರು. ಲಕ್ಷೇಶ್ವರ ಪುರಸಭೆಯಲ್ಲಿ ಈ ಬಾರಿ ಬಿಜೆಪಿ ಒಡೆದ ಮನೆಯಾಗಿದ್ದು, ಪಕ್ಷದ ವಿಪ್ ಉಲ್ಲಂಘಿಸಿದ ಬಿಜೆಪಿ ಸದಸ್ಯೆ ಯಲ್ಲವ್ವ ದುರ್ಗಣ್ಣವರ ಕಾಂಗ್ರೆಸ್ ಕಡೆ ವಾಲಿದರು. ಕಾಂಗ್ರೆಸ್ಸಿನ 9, ಜೆಡಿಎಸ್ ಒಬ್ಬರು ಹಾಗೂ ಐವರು ಪಕ್ಷೇತರರ ಬೆಂಬಲದೊಂದಿಗೆ ಯಲ್ಲಮ್ಮ ದುರ್ಗಣ್ಣವರ ಅಧ್ಯಕ್ಷರಾದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ಫಿರದೋಷ ಆಡೂರು ಆಯ್ಕೆಯಾದರು.
ಕ್ಷೇತ್ರ ಕಡೆಗಣನೆಯ ಕೂಗು: ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ನಾಯಕರು ಹೆಚ್ಚಿನ ಇಚ್ಛಾಶಕ್ತಿ ವಹಿಸದೇ ಇರುವ ಹಿನ್ನೆಲೆಯಲ್ಲಿ ವರ್ಷದ ಕೊನೆಯಲ್ಲಿ ಜಿಲ್ಲೆಯ ರೋಣ ಪಟ್ಟಣಕ್ಕೆ ಸಿಎಂ ಆಗಮಿಸಿ ₹ 200 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಹೊರತುಪಡಿಸಿದಲ್ಲಿ ವರ್ಷವಿಡೀ ಗದಗ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ದೊರೆಯಲಿಲ್ಲ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿದ್ದು, ನರಗುಂದ ಮತ್ತು ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಗದಗ ಮತ್ತು ರೋಣದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ.