ಸಾರಾಂಶ
ಊರಲ್ಲಿ ಫೇಲಾಗಿ ಮನೆ ಬಿಟ್ಟಿದ್ದ । ಬೆಂಗಳೂರಿನಲ್ಲೀಗ ಇಂಟಿರಿಯರ್ ಡಿಸೈನರ್
ಕನ್ನಡಪ್ರಭ ವಾರ್ತೆ ಉಡುಪಿಸುಮಾರು 13 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕಾರ್ಕಳದ ಯುವಕನೊಬ್ಬನನ್ನು ಪೊಲೀಸರೀಗ ಬೆಂಗಳೂರಿನಲ್ಲಿ ಪತ್ತೆ ಮಾಡಿ ಮತ್ತೆ ಹೆತ್ತವರ ಬಳಿಗೆ ಸೇರಿಸಿದ ಘಟನೆ ನಡೆದಿದೆ.ವಿಶೇಷ ಎಂದರೆ ಪರೀಕ್ಷೆಯಲ್ಲಿ ಫೇಲಾಗಿ ಊರು ಬಿಟ್ಟಿದ್ದ ಈ ಯುವಕ, ಇದೀಗ ಬೆಂಗಳೂರಿನಲ್ಲಿ ಯಶಸ್ವಿ ಇಂಟಿರಿಯರ್ ಡಿಸೈನರ್ ಆಗಿ ಮನೆಗೆ ಮರಳಿದ್ದಾನೆ!ಕಾಣೆಯಾದ ಯುವಕ ಕಾರ್ಕಳದ ಪ್ರಭಾಕರ ಪ್ರಭು ಎಂಬವರ ಮಗ ಅನಂತಕೃಷ್ಣ ಪ್ರಭು. 2012ರಲ್ಲಿ ಆತನ 16ನೇ ವಯಸ್ಸಿನಲ್ಲಿ ಡಿಸೆಂಬರ್ ತಿಂಗಳ ಒಂದು ದಿನ ಸಂಜೆ ದೇವಸ್ಥಾನಕ್ಕೆ ಹೋಗುತ್ತೇನೆಂದು ಮನೆಯಿಂದ ಹೊರಟಿದ್ದ ಅನಂತಕೃಷ್ಣ ಮತ್ತೆ ಮನೆಗೆ ಬರಲಿಲ್ಲ. ತಂದೆ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.ಇದೀಗ ಮತ್ತೆ ಈ ಪ್ರಕರಣದ ತನಿಖೆಗೆ ತಂಡವೊಂದನ್ನು ರಚಿಸಲಾಗಿದ್ದು, ಅನಂತಕೃಷ್ಣ ಬೆಂಗಳೂರಿನಲ್ಲಿರುವುದನ್ನು ಪತ್ತೆ ಮಾಡಲಾಯಿತು. ಆತನನ್ನು ಊರಿಗೆ ಕರೆತಂದು ಬುಧವಾರ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರ ಕಚೇರಿಯಲ್ಲಿ ಹೆತ್ತವರೊಂದಿಗೆ ಭೇಟಿ ಮಾಡಿಸಿ, ಸಂತಸದ ವಾತಾವರಣದಲ್ಲಿ ಕುಟುಂಬವನ್ನು ಮತ್ತೆ ಒಂದುಗೂಡಿಸಲಾಯಿತು.ಅಂದು ಪಿಯುಸಿ ಓದುತ್ತಿದ್ದ ಅನಂತಕೃಷ್ಣ ಪರೀಕ್ಷೆಯಲ್ಲಿ ಫೇಲಾಗಿದ್ದ, ಕಾಲೇಜಿನಲ್ಲಿ ಹೆತ್ತವರನ್ನು ಕರೆತರುವಂತೆ ಹೇಳಲಾಗಿತ್ತು. ಇದರಿಂದ ಹೆದರಿದ ಆತ ಹೇಳದೇಕೇಳದೆ ಊರು ಬಿಟ್ಟು ಬೆಂಗಳೂರು ಸೇರಿದ್ದ. ಅಲ್ಲಿ ಅವರಿವರ ಸಹಾಯದಿಂದ ಕೆಲಸ ಮಾಡುತ್ತಾ ಶಿಕ್ಷಣವನ್ನೂ ಪೂರ್ಣಗೊಳಿಸಿದ ಮಾತ್ರವಲ್ಲದೇ ಇದೀಗ ಯಶಸ್ವಿ ಇಂಟಿರಿಯರ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿದ್ದಾನೆ.ಸದಾ ಹೆತ್ತವರ ನೆನಪಾಗುತಿದ್ದರೂ, ಒಂದಿಷ್ಟು ಹಣ ಸಂಪಾದಿಸಿ ಬೆಂಗಳೂರಿನಲ್ಲೊಂದು ಸ್ವಂತ ಪ್ಲಾಟ್, ಕಾರು ಖರೀದಿಸಿ, ಊರಿಗೆ ಬಂದು ಮನೆಯವರಿಗೆ ಸರ್ಪ್ರೈಸ್ ಕೊಡುವ ಯೋಚನೆಯಲ್ಲಿದ್ದ. ಆದರೆ ಅದಕ್ಕೆ ಮೊದಲೇ ಪೊಲೀಸರು ಆತನನ್ನು ಪತ್ತೆ ಮಾಡಿ ಕುಟುಂಬದವರೊಂದಿಗೆ ಸೇರಿಸಿದ್ದಾರೆ.