ಸಾರಾಂಶ
ಆಧಾರ್ ಕಾರ್ಡ್ ಹೊಂದಿದವರು ಮರಣ ಹೊಂದಿದ್ದಲ್ಲಿ ಅವರ ವಾರಾಸುದಾರರು ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್ ಕಾರ್ಡನ್ನು ರದ್ದುಪಡಿಸಬೇಕು. ರದ್ದುಪಡಿಸದಿದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ದುರುಪಯೋಗವಾಗುವ ಸಾಧ್ಯತೆಗಳಿದ್ದು, ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಡಿಸಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ದೇಶದ ನಾಗರಿಕರಿಗೆ ಆಧಾರ್ ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಚಾಲ್ತಿಯಲ್ಲಿರುವ ಆಧಾರ್ ಗುರುತಿನ ಚೀಟಿ ಹೊಂದಬೇಕು. 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ನೋಂದಣಿಗೆ ಸಮೀಪದ ಅಂಚೆ ಕಚೇರಿ, ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದ್ದಾರೆ.ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಈವರೆಗೆ 14,12,357 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 37,700 ಮಕ್ಕಳು, 5ರಿಂದ 18 ವರ್ಷದವರು 2,06,567 ಹಾಗೂ 18 ವರ್ಷ ಮೇಲ್ಪಟ್ಟ 11,73,090 ಮಂದಿ ಕಾರ್ಡು ಹೊಂದಿದ್ದಾರೆ ಎಂದರು.15 ವರ್ಷದ ನಂತರ ಕಡ್ಡಾಯವಾಗಿ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ 43,437 ಜನರು, 15 ವರ್ಷ ಮೇಲ್ಪಟ್ಟ 44,481 ಜನ ಸೇರಿದಂತೆ ಒಟ್ಟು 87,918 ಜನರು ನವೀಕರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.ಕಳೆದ 10 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಕೊಂಡವರು ಗುರುತಿನ ಹಾಗೂ ವಿಳಾಸ ದಾಖಲೆಯನ್ನು ಸಮೀಪದ ಆಧಾರ್ ಕೇಂದ್ರದಲ್ಲಿ ಮರು ನೋಂದಣಿ ಮಾಡಿಕೊಳ್ಳಬೇಕು. ಇದನ್ನು ಆನ್‌ಲೈನ್ ಮೂಲಕವೂ ನವೀಕರಿಸಲು ಅವಕಾಶವಿದೆ. ನವೀಕರಿಸದಿದ್ದಲ್ಲಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಸೌಲಭ್ಯ ಅಥವಾ ಸೇವೆ ಪಡೆಯಲು ಅನಾನುಕೂಲವಾಗುತ್ತದೆ ಎಂದರು.
ಆಧಾರ್ ಕಾರ್ಡ್ ಹೊಂದಿದವರು ಮರಣ ಹೊಂದಿದ್ದಲ್ಲಿ ಅವರ ವಾರಾಸುದಾರರು ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್ ಕಾರ್ಡನ್ನು ರದ್ದುಪಡಿಸಬೇಕು. ರದ್ದುಪಡಿಸದಿದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ದುರುಪಯೋಗವಾಗುವ ಸಾಧ್ಯತೆಗಳಿದ್ದು, ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಯು.ಐ.ಡಿ.ಎ.ಐ. ನಿರ್ದೇಶಕ ಮನೋಜ್ ಕುಮಾರ್, ಸಹಾಯಕ ವ್ಯವಸ್ಥಾಪಕ ಮೊಹಮ್ಮದ್ ಮೂಸಾಬ್, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಎಎಸ್ಪಿ ಸಿದ್ಧಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಡಿಡಿಪಿಯು ಗಣಪತಿ, ಡಿಡಿಪಿಐ ಮಾರುತಿ, ಐಟಿಡಿಪಿ ಯೋಜನಾ ಸಮನ್ಯಾಧಿಕಾರಿ ನಾರಾಯಣ ಸ್ವಾಮಿ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))