ಸಾರಾಂಶ
ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರು, ಅವರ ಸಲಹೆಯನ್ನು ಸ್ವಾಗತಿಸುತ್ತೇನೆ. ಆದಷ್ಟು ಬೇಗ ವೋಟರ್‌ಐಡಿಗೆ ಆಧಾರ್‌ಲಿಂಕ್ ಮಾಡುವ ನಿರ್ಧಾರ ಮಾಡಲಿ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಕೆಲಸವಾಗಲಿ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮತದಾರರ ಗುರುತಿನ ಚೀಟಿಗೆ ಆಧಾರ್‌ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಿಲುವು ಸ್ವಾಗತಾರ್ಹವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬ ವ್ಯಕ್ತಿಗೆ ಎರಡು ಕಡೆ ಮತದಾನದ ಹಕ್ಕಿದ್ದರೆ ಎರಡೂ ಕಡೆಗಳಲ್ಲಿಯೂ ಮತದಾನ ಮಾಡಲು ಕೆಲವು ಸಮಯದಲ್ಲಿ ಅವಕಾಶ ಸಿಗುತ್ತದೆ. ಆದ್ದರಿಂದ ಮತದಾರರ ಗುರುತಿನ ಚೀಟಿಗೆ ಆಧಾರ್‌ಲಿಂಕ್ ಮಾಡಿದರೆ ಮತದಾನ ಪಾರದರ್ಶಕವಾಗಿ ನಡೆಯುವ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸಿದಂತಾಗುತ್ತದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರು, ಅವರ ಸಲಹೆಯನ್ನು ಸ್ವಾಗತಿಸುತ್ತೇನೆ. ಆದಷ್ಟು ಬೇಗ ವೋಟರ್‌ಐಡಿಗೆ ಆಧಾರ್‌ಲಿಂಕ್ ಮಾಡುವ ನಿರ್ಧಾರ ಮಾಡಲಿ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಕೆಲಸವಾಗಲಿ ಎಂದರು.ಇಡೀ ರಾಷ್ಟ್ರದಲ್ಲಿ ಮತಗಳ್ಳತನ ಹಲವು ಚುನಾವಣೆಗಳಲ್ಲಿ ನಡೆದಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಮತಗಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ನಮ್ಮ ರಾಜ್ಯದಲ್ಲಿಯೂ ಇದ್ದಕ್ಕಿದ್ದಂಗೆ ಬಹಳ ವ್ಯತ್ಯಾಸವಾಗಿರುವುದನ್ನು ಆಂತರಿಕವಾಗಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಪುರಾವೆ ಸಿಕ್ಕಿರುವ ಹಿನ್ನೆಲೆ ರಾಷ್ಟ್ರಮಟ್ಟದ ಮೊದಲ ಪ್ರತಿಭಟನಾ ಸಭೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ ಎಂದು ತಿಳಿಸಿದರು.
ರಾಜ್ಯದ ಯಾವೊಂದು ಕ್ಷೇತ್ರದಲ್ಲಿಯೂ ಮತದಾರರ ಗುರುತಿನ ಚೀಟಿಯನ್ನೇ ಪಡೆಯದಿರುವ ಹೊರರಾಜ್ಯದ ಹಲವು ಮತದಾರರು ನಮ್ಮ ರಾಜ್ಯದ ಮತದಾರರ ಪಟ್ಟಿಯಲ್ಲಿದ್ದಾರೆ. ಖಾಲಿ ನಿವೇಶನವಿರುವ ಸ್ಥಳದಲ್ಲಿಯೂ 80 ಮತ ಸೇರ್ಪಡೆಯಾಗಿವೆ. ನಾಲ್ಕು ಮತಗಳ ಜೊತೆಗೆ 50 ಮತಗಳು ಸೇರ್ಪಡೆಯಾಗಿವೆ. ಇದೆಲ್ಲವೂ ನಿಜವೆನಿಸಿದಾಗ ರಾಹುಲ್ ಗಾಂಧಿ ಅವರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಇಂಡಿಯಾ ಒಕ್ಕೂಟದ ಎಲ್ಲಾ ಸಂಸದರೂ ಕೂಡ ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ ಎಂದರು.