ಸಾರಾಂಶ
- ದಿವ್ಯಾ ಕಾರುಣ್ಯ ಆನಂದಾಶ್ರಮದಲ್ಲಿ ಅನಾಥರಿಗೆ ಆಧಾರ್ ಕಾರ್ಡು ಮಾಡಿಸುವ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಾನವೀಯತೆ ದೃಷ್ಟಿಯಿಂದ ಅನಾಥಾಶ್ರಮದಲ್ಲಿರುವ ಅನಾಥರು ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಆಧಾರ್ ಕಾರ್ಡು ಮಾಡಿಸುತ್ತಿರುವುದಾಗಿ ತಹಸೀಲ್ದಾರ್ ಡಾ.ನೂರುಲ್ ಹುದಾ ತಿಳಿಸಿದರು.
ಗುರುವಾರ ತಾಲೂಕಿನ ಬಿ.ಎಚ್.ಕೈಮರ ಸಮೀಪದ ಮತ್ತಿಮರ ದಿವ್ಯ ಕಾರುಣ್ಯ ಆನಂದಾಶ್ರಮದಲ್ಲಿ ಅನಾಥರಿಗೆ ಆಧಾರ್ ಮಾಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನವೀಯತೆ ದೃಷ್ಠಿಯಿಂದ ಸರ್ಕಾರದ ಅಧಿಕಾರಿಗಳು ಅನಾಥಾಶ್ರಮಕ್ಕೆ ಬಂದು ಆಧಾರ್ ಕಾರ್ಡು ಮಾಡಿಸಿಕೊಡುತ್ತಿದ್ದಾರೆ. ಇದರಿಂದ ಸರ್ಕಾರದಿಂದ ಪೆನ್ಷ್‌ನ್, ಪಡಿತರ ಸಿಗಲಿದೆ ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಪಟ್ಟಣದ ಹಲವು ವಾರ್ಡ್ ಹಾಗೂ ತಾಲೂಕಿನ ಅನಾಥಾಶ್ರಮ ದಲ್ಲಿರುವ ಅನೇಕರಿಗೆ ಆಧಾರ್ ಕಾರ್ಡು ಇಲ್ಲದೆ ಇರುವುದು ನನ್ನ ಗಮನಕ್ಕೆ ಬಂದಿತ್ತು. ಇದರಿಂದ ಅನೇಕ ವೃದ್ಧರಿಗೆ, ಅನಾಥಾಶ್ರಮದಲ್ಲಿರುವ ಅನಾಥರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ. ಅನ್ನ ಭಾಗ್ಯ, ಪೆನ್ಸನ್ ಸಿಗ ಬೇಕಾದರೆ ಆಧಾರ್ ಕಾರ್ಡು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೆ.
ಈ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಟಿ.ಡಿ. ರಾಜೇಗೌಡರು ಹಾಗೂ ಲೋಕ ಸಭಾ ಸದಸ್ಯರು, ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡು ಮಾಡಿಸಬೇಕು. ಸಂಬಂಧಪಟ್ಟವರಿಗೆ ಯುಡಿಐಡಿ ಕಾರ್ಡು ಮಾಡಿಸಿಕೊಡಿ ಎಂದು ಸೂಚಿಸಿದರು. ಇದರಿಂದ ಇಂದು ಅಧಿಕಾರಿಗಳು ಅನಾಥಾಶ್ರಮಕ್ಕೆ ಆಗಮಿಸಿ ಆಧಾರ್ ಕಾರ್ಡು ಮಾಡಿಸಿ ಕೊಡುತ್ತಿದ್ದಾರೆ. ನನ್ನ ಪ್ರಯತ್ನಕ್ಕೆ ಇಂದು ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀರೇಶ್ ಮಾತನಾಡಿ, ನರಸಿಂಹರಾಜಪುರದಲ್ಲಿ 4 ಅನಾಥಾ ಶ್ರಮ ಗಳಿದ್ದು ಯಾರಿಗೂ ಆಧಾರ್ ಕಾರ್ಡುಗಳಿರಲಿಲ್ಲದೆ ಸೌಲಭ್ಯ ವಂಚಿತರಾಗಿದ್ದರು. ಆಧಾರ್ ಕಾರ್ಡು ಮಾಡಿಸುವ ಜವಾಬ್ದಾರಿ ನಮ್ಮ ಇಲಾಖೆಗೆ ಬಂದಿದ್ದು ಇದನ್ನು ಸೂಕ್ತವಾಗಿ ನಿರ್ವಹಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದಿವ್ಯ ಕಾರುಣ್ಯ ಆನಂದಾಶ್ರಮದ ಮುಖ್ಯಸ್ಥೆ ಲಿಸ್ಸಿ,ಅಂಚೆ ಕಚೇರಿ ಅಧಿಕಾರಿಗಳು ಇದ್ದರು.ತಾಲೂಕಿನ ಮತ್ತಿಮರ ಆನಂದಾಶ್ರಮದ 57 ಅನಾಥರಿಗೆ, ಸೀಗುವಾನಿ ಅನಾಥಾಶ್ರಮದ 43 ಅನಾಥರಿಗೆ, ಸುಗ್ಗಪ್ಪನ ಮಠದ ಅನಾಥಾಶ್ರಮದ 9 ಜನರಿಗೆ ಹಾಗೂ ಚಿಟ್ಟಿಕೊಡಿಗೆ ಮಕ್ಕಳ ಅನಾಥಾಶ್ರಮದ 16 ಜನರಿಗೆ ಆಧಾರ್ ಕಾರ್ಡು ಮಾಡುವ ಕಾರ್ಯಕ್ರಮ ಅಧಿಕಾರಿಗಳು ಹಮ್ಮಿಕೊಂಡಿದ್ದಾರೆ.